ಕತಾರ್‌ನಿಂದ ಭಾರತಕ್ಕೆ UPI ಮೂಲಕ ಹಣ ಕಳುಹಿಸುವ ಸೇವೆ ಆರಂಭ

0
money-note-Rs-500-currency-rbi-300x168-1

ನವದೆಹಲಿ: ಕತಾರ್‌ನಲ್ಲಿ ವಾಸಿಸುವ ಭಾರತೀಯರಿಗೆ ಅನುಕೂಲವಾಗುವಂತೆ ಕತಾರ್ ಪೋಸ್ಟ್ ಔಟ್‌ಲೆಟ್‌ಗಳ ಮೂಲಕ UPI ಆಧಾರಿತ ಡಿಜಿಟಲ್ ರವಾನೆ ಸೇವೆ ಆರಂಭಿಸಲಾಗಿದೆ. ಇದರ ಮೂಲಕ ಕತಾರ್‌ನಿಂದ ಭಾರತದಲ್ಲಿರುವ UPI ಸಕ್ರಿಯ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಕಳುಹಿಸಬಹುದು.

ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 15ರಿಂದ ‘PosTransfer’ ಸೇವೆ ಕತಾರ್‌ನಲ್ಲಿ ಕಾರ್ಯಾರಂಭಿಸಿದೆ. ಕತಾರ್ ಪೋಸ್ಟ್, ಇಂಡಿಯಾ ಪೋಸ್ಟ್, ಯುನಿವರ್ಸಲ್ ಪೋಸ್ಟಲ್ ಯೂನಿಯನ್‌ನ ಇಂಟರ್‌ಕನೆಕ್ಷನ್ ಪ್ಲಾಟ್‌ಫಾರ್ಮ್ (UPU-IP) ಮತ್ತು NPCI ಇಂಟರ್‌ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (NIPL) ಸಹಯೋಗದಲ್ಲಿ ಈ ಸೇವೆ ಅಭಿವೃದ್ಧಿಪಡಿಸಲಾಗಿದೆ.

ಗ್ರಾಹಕರು ಕತಾರ್ ಪೋಸ್ಟ್ ಔಟ್‌ಲೆಟ್‌ನಲ್ಲಿ ಫಲಾನುಭವಿಯ UPI ಐಡಿ ಹಾಗೂ ಅಗತ್ಯ ಗುರುತಿನ ವಿವರಗಳನ್ನು ನೀಡಿ ಹಣ ವರ್ಗಾವಣೆ ಮಾಡಬಹುದು. ಫಲಾನುಭವಿಯು ತಮ್ಮ UPI ಆ್ಯಪ್‌ನಲ್ಲಿ ವಿದೇಶಿ ಒಳಮುಖ ರವಾನೆ ಸ್ವೀಕರಿಸುವ ಸೌಲಭ್ಯವನ್ನು ಸಕ್ರಿಯಗೊಳಿಸಿರಬೇಕು.

ಸೌಲಭ್ಯ ಸಕ್ರಿಯವಾಗಿದ್ದರೆ, ಹಣವು ಫಲಾನುಭವಿಯ UPI-ಸಕ್ರಿಯ ಬ್ಯಾಂಕ್ ಖಾತೆಗೆ ತಕ್ಷಣ ಜಮೆಯಾಗಲಿದೆ.

ವಹಿವಾಟಿನ ಮೊತ್ತ QAR 10ರಿಂದ QAR 4,000 ವರೆಗೆ ಇರಲಿದ್ದು, ಪ್ರತಿ ವಹಿವಾಟಿಗೆ ಗರಿಷ್ಠ ₹1 ಲಕ್ಷಕ್ಕೆ ಸಮಾನವಾದ ಮೊತ್ತವನ್ನು ಕಳುಹಿಸಬಹುದು. ಪ್ರತಿ ವಹಿವಾಟಿಗೆ QAR 15 ಸೇವಾ ಶುಲ್ಕ ನಿಗದಿಪಡಿಸಲಾಗಿದೆ.

ಕತಾರ್‌ನಲ್ಲಿರುವ ದೊಡ್ಡ ಭಾರತೀಯ ಸಮುದಾಯಕ್ಕೆ ಸುರಕ್ಷಿತ ಹಾಗೂ ಸುಲಭವಾಗಿ ಹಣ ಕಳುಹಿಸುವ ಅವಕಾಶ ಕಲ್ಪಿಸುವುದು ಈ ಸೇವೆಯ ಉದ್ದೇಶವಾಗಿದೆ. UPI ಆಧಾರಿತ PosTransfer ಸೇವೆಯನ್ನು ಇತರ ದೇಶಗಳಿಗೂ ವಿಸ್ತರಿಸಲು ಇಂಡಿಯಾ ಪೋಸ್ಟ್ ಕ್ರಮ ಕೈಗೊಳ್ಳುತ್ತಿದೆ.

Leave a Reply

Your email address will not be published. Required fields are marked *