‘ಪ್ರಜಾಪ್ರಭುತ್ವವನ್ನು ಕಲಿಯಿರಿ, ಮುನ್ನಡೆಸಿ’: ಸಿಇಸಿ ಜ್ಞಾನೇಶ್ ಕುಮಾರ್

ಪಾಟ್ನಾ: ಚುನಾವಣಾ ಸಾಕ್ಷರತೆ ಹೆಚ್ಚಿಸುವ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ನಂಬಿಕೆ ಬೆಳೆಸಲು ಹಾಗೂ ಯುವಜನರ ಮಾಹಿತಿಯುಕ್ತ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಪಾತ್ರ ವಹಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕರೆ ನೀಡಿದ್ದಾರೆ.
ಪಾಟ್ನಾದಲ್ಲಿ ಸೋಮವಾರ ನಡೆದ ‘ಚುನಾವಣಾ ಸಾಕ್ಷರತಾ ಕ್ಲಬ್‌ಗಳು ಮತ್ತು ಇಸಿಐನೆಟ್’ ಕುರಿತ ಸಮ್ಮೇಳನದಲ್ಲಿ ಮಾತನಾಡಿದ ಅವರು, ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವರ್ಷಪೂರ್ತಿ ಚುನಾವಣಾ ಜಾಗೃತಿ ಮೂಡಿಸುವ ‘ಚುನಾವಣಾ ಸಾಕ್ಷರತಾ ಕ್ಲಬ್ (ELC 2.0)’ ಉಪಕ್ರಮಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿಗಳು ಹಾಗೂ ಯುವ ಮತದಾರರು ಭಾರತದ ಚುನಾವಣಾ ವ್ಯವಸ್ಥೆ, ಪ್ರಜಾಪ್ರಭುತ್ವದ ಮೌಲ್ಯಗಳು, ಮತದಾರರ ನೋಂದಣಿ, ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆ ಸೇರಿದಂತೆ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ತಿಳಿದುಕೊಳ್ಳಬೇಕು ಎಂದು ಕುಮಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಹೊಸ ELC ಲೋಗೋ ಮತ್ತು ‘ಪ್ರಜಾಪ್ರಭುತ್ವವನ್ನು ಕಲಿಯಿರಿ. ಪ್ರಜಾಪ್ರಭುತ್ವವನ್ನು ಮುನ್ನಡೆಸಿ.’ ಎಂಬ ಘೋಷವಾಕ್ಯವನ್ನು ಅನಾವರಣಗೊಳಿಸಲಾಯಿತು.

ECINet ಡಿಜಿಟಲ್ ವೇದಿಕೆ ಹಾಗೂ ವಿಶೇಷ ELC ಪೋರ್ಟಲ್ ಮೂಲಕ ದೇಶಾದ್ಯಂತ ಚುನಾವಣಾ ಸಾಕ್ಷರತಾ ಕ್ಲಬ್‌ಗಳ ಡಿಜಿಟಲ್ ಜಾಲವನ್ನು ನಿರ್ಮಿಸಲಾಗುವುದು. ಈ ಯೋಜನೆಯು ಸುಮಾರು 15 ಲಕ್ಷ ಶಾಲೆಗಳು, 25 ಕೋಟಿ ವಿದ್ಯಾರ್ಥಿಗಳು, ಒಂದು ಕೋಟಿಗೂ ಹೆಚ್ಚು ಶಿಕ್ಷಕರು, 1,500 ವಿಶ್ವವಿದ್ಯಾಲಯಗಳು ಮತ್ತು 70,000 ಉನ್ನತ ಶಿಕ್ಷಣ ಸಂಸ್ಥೆಗಳನ್ನು ಒಳಗೊಳ್ಳಲಿದೆ.
ಯುವಜನರ ಮಾಹಿತಿಯುಕ್ತ ಭಾಗವಹಿಸುವಿಕೆ ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಮಹತ್ವದ ಹೂಡಿಕೆಯಾಗಿದೆ ಎಂದು ಸಿಇಸಿ ಹೇಳಿದರು.
ಇದಕ್ಕೂ ಮುನ್ನ ಜ್ಞಾನೇಶ್ ಕುಮಾರ್ ನಳಂದದಲ್ಲಿ ಬೂತ್ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಅವರ ಎರಡು ದಿನಗಳ ಬಿಹಾರ ಪ್ರವಾಸದಲ್ಲಿ ಮಧುಬನಿ, ವೈಶಾಲಿ ಹಾಗೂ ನಳಂದಕ್ಕೂ ಭೇಟಿ ನೀಡಿದರು.
