ಡಿಕೆಶಿ ಸರ್ಕಾರವನ್ನು ಸುತ್ತಿಕೊಂಡ ಬಹುಕೋಟಿ ತ್ಯಾಜ್ಯ ಹಗರಣ; ಲೋಕಾಯುಕ್ತಕ್ಕೆ ದೂರು,

ಬೆಂಗಳೂರು: ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (ಬಿಎಸ್‌ಡಬ್ಲ್ಯುಎಂಎಲ್) ನಗರದ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ, ಅಧಿಕಾರ ದುರ್ಬಳಕೆ ಹಾಗೂ ಗುತ್ತಿಗೆದಾರರೊಂದಿಗೆ ಶಾಮೀಲಾತಿ ನಡೆದಿದೆ ಎಂದು ಆರೋಪಿಸಿ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರ ಗುತ್ತಿಗೆದಾರರ ಸಂಘದ ಪ್ರಮುಖರು ನವೆಂಬರ್ 17ರಂದು ದೂರು ಸಲ್ಲಿಸಿದ್ದು, ಬಿಎಸ್‌ಡಬ್ಲ್ಯುಎಂಎಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರೀಗೌಡ, ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ವಿ. ರಾಜೇಶ್, ಉಪ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್ ಹಾಗೂ ಸಹಾಯಕ ಎಂಜಿನಿಯರ್ ನೀಲೇಶ್ ಕುಮಾರ್ ಅವರ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
2025ರ ಜುಲೈ 30ರಂದು 33 ಪ್ಯಾಕೇಜ್‌ಗಳಿಗೆ ಸಂಬಂಧಿಸಿದಂತೆ ಟೆಂಡರ್ ಆಹ್ವಾನಿಸಲಾಗಿತ್ತು. ಬಳಿಕ ವಿವಿಧ ಹಂತಗಳಲ್ಲಿ 22 ಪ್ರತ್ಯೇಕ ಟೆಂಡರ್ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ (ಕೆಟಿಪಿಪಿ) ಹಾಗೂ ಸರ್ಕಾರದ ಹಣಕಾಸು ಇಲಾಖೆಯ ಸುತ್ತೋಲೆಗಳನ್ನು ಉಲ್ಲಂಘಿಸಲಾಗಿದೆ ಎಂಬುದು ದೂರುದಾರರ ಆರೋಪ.
ಅನರ್ಹ ಬಿಡ್‌ದಾರರನ್ನು ಅರ್ಹರೆಂದು ಪರಿಗಣಿಸಿರುವುದು, ಅವಧಿ ಮುಗಿದ ಬ್ಯಾಂಕ್ ಗ್ಯಾರಂಟಿ ಹೊಂದಿದ್ದ ಗುತ್ತಿಗೆದಾರರಿಗೆ ಟೆಂಡರ್ ನೀಡಿರುವುದು, ನಿಗದಿತ ಅವಧಿಯಲ್ಲಿ ಕಾಮಗಾರಿ ಆರಂಭಿಸದವರಿಗೆ ಕಾಲಾವಕಾಶ ವಿಸ್ತರಿಸಿರುವುದು ಹಾಗೂ ಟೆಂಡರ್ ಸಲ್ಲಿಕೆಯ ನಂತರ ವಾಹನಗಳ ತಾಂತ್ರಿಕ ಮಾನದಂಡಗಳನ್ನು ಸಡಿಲಿಸಿರುವುದನ್ನು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.
ಇದಲ್ಲದೆ, ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಪಾವತಿಯಲ್ಲಿ ಬಾಕಿ ಹೊಂದಿರುವ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆಯ ಮಾತುಕತೆ ಮತ್ತು ಕಾರ್ಯಾದೇಶಗಳನ್ನು ಆನ್‌ಲೈನ್ ಪೋರ್ಟಲ್ ಬದಲಿಗೆ ಕೈಯಾರೆ ನಿರ್ವಹಿಸಿರುವ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.
ಟೆಂಡರ್ ಅಂದಾಜು ಮೊತ್ತಕ್ಕಿಂತ ಶೇ 14ರಷ್ಟು ಹೆಚ್ಚಿನ ದರದಲ್ಲಿ ಕಾಮಗಾರಿ ನೀಡುವ ಮೂಲಕ ಸಾರ್ವಜನಿಕ ಬೊಕ್ಕಸಕ್ಕೆ ಸುಮಾರು ₹350 ಕೋಟಿ ಹೆಚ್ಚುವರಿ ಹೊರೆ ಉಂಟಾಗುವ ಸಾಧ್ಯತೆಯಿದೆ. ಅಲ್ಲದೆ, ಟೆಂಡರ್ ಅಂದಾಜಿನಲ್ಲಿ ಹೆಚ್ಚುವರಿ ವೆಚ್ಚ, ಟೆಂಡರ್ ಪ್ರೀಮಿಯಂ ಮತ್ತು ವಾರ್ಷಿಕ ದರ ಏರಿಕೆ ಸೇರಿಸುವ ಮೂಲಕ ₹660 ಕೋಟಿ ನಷ್ಟವಾಗುವ ಸಾಧ್ಯತೆಯಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
2026ರ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 31ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಟೆಂಡರ್ ಪ್ರಕ್ರಿಯೆ ಮುಂದುವರಿಸಿರುವುದು ಹಾಗೂ ಕೆಲವು ಪ್ಯಾಕೇಜ್‌ಗಳಿಗೆ ಕಾರ್ಯಾದೇಶ ನೀಡಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಟೆಂಡರ್ ದಾಖಲೆಗಳು, ಹಣಕಾಸು ಬಿಡ್‌ಗಳು, ಅನುಮೋದನೆಗಳು, ಇಪಿಎಫ್ ದಾಖಲೆಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳ ನಿರ್ಧಾರಗಳನ್ನು ಸ್ವತಂತ್ರವಾಗಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತರನ್ನು ಕೋರಲಾಗಿದೆ.
