BSWML ತ್ಯಾಜ್ಯ ಅಕ್ರಮ ಟೆಂಡರ್‌ ಆರೋಪ: ₹350 ಕೋಟಿ ಹೆಚ್ಚುವರಿ ಹೊರೆ, ₹660 ಕೋಟಿ ಆರ್ಥಿಕ ನಷ್ಟದ ಆರೋಪ; ನಾಲ್ವರು ಅಧಿಕಾರಿಗಳ ವಿರುದ್ಧ ತನಿಖೆಗೆ ಗುತ್ತಿಗೆದಾರರ ಸಂಘದ ಆಗ್ರಹ

0
Lokayukta-Complaint-against-BSWML-2
  • ತ್ಯಾಜ್ಯ ನಿರ್ವಹಣೆ ಟೆಂಡರ್‌ನಲ್ಲಿ ಭಾರೀ ಅಕ್ರಮದ ಆರೋಪ!
  • ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ವಿರುದ್ಧ ಲೋಕಾಯುಕ್ತಕ್ಕೆ ದೂರು!
  • ಟೆಂಡರ್ ಪ್ರಕ್ರಿಯೆಯಲ್ಲಿ ಅಧಿಕಾರ ದುರ್ಬಳಕೆ, ಗುತ್ತಿಗೆದಾರರ ಜೊತೆ ಶಾಮೀಲಾತಿ ಆರೋಪ!
  • ನಾಲ್ವರು ಅಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹ!

ಬೆಂಗಳೂರು: ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ನಗರದ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ಕಾಮಗಾರಿಗಳ ಟೆಂಡರ್ ಅವಾಂತರ ಮತ್ತೆ ಸುದ್ದಿಯ ಮುನ್ನೆಲೆಗೆ ಬಂದಿದೆ. ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ, ಅಧಿಕಾರ ದುರ್ಬಳಕೆ ಹಾಗೂ ಗುತ್ತಿಗೆದಾರರೊಂದಿಗೆ ಶಾಮೀಲಾತಿ ಆರೋಪ ಬಗ್ಗೆ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದ್ದು, ಅಧಿಕಾರಿಗಳಿಗೆ ಸಂಕಷ್ಟ ಎದುರಾದಂತಿದೆ.

ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎನ್. ಬಾಲಸುಬ್ರಮಣಿಯಂ ಅವರು ನವೆಂಬರ್ 17ರಂದು ದೂರು ಸಲ್ಲಿಸಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. BSWML ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ, ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ವಿ. ರಾಜೇಶ್, ಉಪ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್ ಮತ್ತು ಸಹಾಯಕ ಎಂಜಿನಿಯರ್ ನೀಲೇಶ್ ಕುಮಾರ್ ಅವರ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ದೂರಿನಲ್ಲಿ ಕೋರಲಾಗಿದೆ.

2025ರ ಜುಲೈ 30ರಂದು 33 ಪ್ಯಾಕೇಜ್‌ಗಳಿಗೆ ಆಹ್ವಾನಿಸಿದ್ದ ಟೆಂಡರ್‌ ಪ್ರಕ್ರಿಯೆಯಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ (ಕೆಟಿಪಿಪಿ) ಹಾಗೂ ಸರ್ಕಾರದ ಹಣಕಾಸು ಇಲಾಖೆಯ ಸುತ್ತೋಲೆಗಳನ್ನು ಉಲ್ಲಂಘಿಸಲಾಗಿದೆ ಎಂಬುದು ದೂರುದಾರರ ಪ್ರಮುಖ ಆರೋಪ. ಅನರ್ಹ ಹಾಗೂ ಭವಿಷ್ಯ ನಿಧಿ (ಇಪಿಎಫ್‌) ಬಾಕಿ ಉಳಿಸಿಕೊಂಡಿರುವ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ. ಅವಧಿ ಮುಗಿದ ಬ್ಯಾಂಕ್ ಗ್ಯಾರಂಟಿ ಹೊಂದಿದ್ದ ಬಿಡ್‌ದಾರರಿಗೂ ಗುತ್ತಿಗೆ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಟೆಂಡರ್‌ನಲ್ಲಿ ನಮೂದಿಸಿದ್ದ ಷರತ್ತುಗಳನ್ನು ಬಿಡ್ ಸಲ್ಲಿಕೆಯ ನಂತರ ಸಡಿಲಿಸಲಾಗಿದೆ. ಕಾಮಗಾರಿ ಆರಂಭಿಸಲು ಕಾಲಾವಕಾಶ ವಿಸ್ತರಿಸಲಾಗಿದೆ. ಆನ್‌ಲೈನ್ ಕೆಪಿಪಿಪಿ ಪೋರ್ಟಲ್‌ನಲ್ಲಿ ನಡೆಯಬೇಕಿದ್ದ ದರ ಮಾತುಕತೆ ಮತ್ತು ಕಾರ್ಯಾದೇಶ ಪ್ರಕ್ರಿಯೆಗಳನ್ನು ನಿಯಮಬಾಹಿರವಾಗಿ ನಡೆಸಲಾಗಿದೆ ಎಂಬ ಆರೋಪಗಳನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಟೆಂಡರ್‌ಗಳನ್ನು ಅಂದಾಜು ಮೊತ್ತಕ್ಕಿಂತ ಶೇ 14ರಷ್ಟು ಹೆಚ್ಚಿನ ದರದಲ್ಲಿ ನೀಡಿರುವುದರಿಂದ ಸಾರ್ವಜನಿಕ ತೆರಿಗೆ ಹಣಕ್ಕೆ ಸುಮಾರು ₹350 ಕೋಟಿ ಹೆಚ್ಚುವರಿ ಹೊರೆ ಉಂಟಾಗುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮತ್ತೊಂದೆಡೆ, ಟೆಂಡರ್ ಅಂದಾಜಿನಲ್ಲಿ ಹೆಚ್ಚುವರಿ ವೆಚ್ಚ, ಟೆಂಡರ್ ಪ್ರೀಮಿಯಂ ಮತ್ತು ವಾರ್ಷಿಕ ದರ ಏರಿಕೆ ಸೇರಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ₹660 ಕೋಟಿ ನಷ್ಟ ಉಂಟಾಗುವ ಸಾಧ್ಯತೆಯಿದೆ ಎಂದೂ ಗಮನಸೆಳೆಯಲಾಗಿದೆ.

2026ರ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 31ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಅವಧಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಂದುವರಿಸಿ, ಕೆಲವು ಪ್ಯಾಕೇಜ್‌ಗಳಿಗೆ ಕಾರ್ಯಾದೇಶ ನೀಡಿರುವುದನ್ನೂ ಪ್ರಶ್ನಿಸಿದ್ದಾರೆ. ಒಟ್ಟು 33 ಪ್ಯಾಕೇಜ್‌ಗಳ ಟೆಂಡರ್ ನಂತರ 22 ಪ್ರತ್ಯೇಕ ಟೆಂಡರ್ ಅಧಿಸೂಚನೆಗಳನ್ನು ಹೊರಡಿಸಿರುವುದರ ಬಗ್ಗೆಯೂ ತನಿಖೆ ನಡೆಸಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ.

ಹಣಕಾಸು ಇಲಾಖೆಯ ಆಕ್ಷೇಪಣೆಗಳು ಮತ್ತು ಅಂಜುಂ ಪರ್ವೇಜ್ ನೇತೃತ್ವದ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸಬೇಕು. ಟೆಂಡರ್ ದಾಖಲೆಗಳು, ಬಿಡ್‌ಗಳ ವಿವರ, ಅನುಮೋದನೆಗಳು ಹಾಗೂ ಸಂಬಂಧಿತ ವಿದ್ಯುನ್ಮಾನ ಸಂವಹನಗಳನ್ನು ವಶಕ್ಕೆ ಪಡೆದು ಸ್ವತಂತ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತರನ್ನು ಕೋರಲಾಗಿದೆ.

ಈ ಅಕ್ರಮ ಆರೋಪ ಬಗ್ಗೆ ಸಿಟಿಜನ್ ರೈಟ್ಸ್ ಫೌಂಡೇಶನ್ ಸಹಿತ ಹಲವರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ದೂರು ಸಲ್ಲಿಸಿದ್ದು, ಈ ವಿಚಾರ ರಾಜಕೀಯ ವಲಯದಲ್ಲೂ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.

Leave a Reply

Your email address will not be published. Required fields are marked *

You may have missed