ಹೊಸ ವಿನ್ಯಾಸ, AI ವೈಶಿಷ್ಟ್ಯಗಳೊಂದಿಗೆ ಬರಲಿದೆ ‘ಆಪಲ್ ಐಫೋನ್ 18’, ಮಹತ್ವದ ರಹಸ್ಯ ಬಯಲು

ಆಪಲ್ ತನ್ನ ಮುಂದಿನ ಐಫೋನ್ ಸರಣಿಯಲ್ಲಿ ಹಲವು ಬದಲಾವಣೆಗಳನ್ನು ತರಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದ್ದು, ಐಫೋನ್ 18 ಬೇಸ್ ಮಾದರಿಯ ಬಿಡುಗಡೆಯ ಸಮಯದಲ್ಲೂ ಬದಲಾವಣೆ ಸಾಧ್ಯತೆ ಇದೆ. ಈ ಸಾಧನವು ಐಫೋನ್ 17 ಸರಣಿಯ ಮುಂದುವರಿದ ರೂಪವಾಗಿ, ಹೆಚ್ಚು ಶಕ್ತಿಶಾಲಿ ಪ್ರೊಸೆಸರ್, ಸುಧಾರಿತ ಕ್ಯಾಮೆರಾ ಮತ್ತು ಹೊಸ ಸಿರಿ AI ವೈಶಿಷ್ಟ್ಯಗಳೊಂದಿಗೆ ಬರಲಿದೆ ಎಂದು ವರದಿಗಳು ತಿಳಿಸಿವೆ.
ಐಫೋನ್ 18ರಲ್ಲಿ 48MP ಮುಖ್ಯ ಕ್ಯಾಮೆರಾ ಮತ್ತು 48MP ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿರುವ ಡ್ಯುಯಲ್ ರಿಯರ್ ಕ್ಯಾಮೆರಾ ವ್ಯವಸ್ಥೆ ಇರಬಹುದು. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 24MP ಮುಂಭಾಗದ ಕ್ಯಾಮೆರಾ ನೀಡುವ ನಿರೀಕ್ಷೆಯಿದೆ.

ಫೋನ್ 6.3 ಇಂಚಿನ LTPO ಸೂಪರ್ ರೆಟಿನಾ XDR OLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 3000 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಹೊಂದಿರಬಹುದು. ಆಪಲ್ A20 ಚಿಪ್, 8GB RAM ಮತ್ತು 256GB ಸ್ಟೋರೇಜ್ ಆಯ್ಕೆಯೊಂದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ಐಫೋನ್ 18 iOS 27 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸಲಿದ್ದು, ಬಳಕೆದಾರರ ಅನುಭವ ಸುಧಾರಿಸಲು ಹೊಸ AI ಆಧಾರಿತ ಸಿರಿ ವೈಶಿಷ್ಟ್ಯಗಳನ್ನು ಒಳಗೊಂಡಿರಬಹುದು. 4000mAh ಬ್ಯಾಟರಿ ಮತ್ತು 25W ಮ್ಯಾಗ್ಸೇಫ್ ಚಾರ್ಜಿಂಗ್ ಬೆಂಬಲ ದೊರೆಯಬಹುದು.
ಭಾರತದಲ್ಲಿ 256GB ಸ್ಟೋರೇಜ್ ಹೊಂದಿರುವ ಮಾದರಿಯ ಬೆಲೆ ಸುಮಾರು ₹85,900 ಇರಬಹುದು ಎಂದು ಅಂದಾಜಿಸಲಾಗಿದೆ. ಬಿಡುಗಡೆಯ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ, 2027ರ ಮಾರ್ಚ್ ವೇಳೆಗೆ ಮಾರುಕಟ್ಟೆಗೆ ಬರಬಹುದು ಎಂಬ ನಿರೀಕ್ಷೆ ಇದೆ.
