ನೀಟ್ ವಿವಾದ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ; ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಿರ್ಧಾರ ಎಂದ ನಾಯಕ

0
Dharmendra-Pradhan-2-300x175-2

ನವದೆಹಲಿ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಗಳ ಬಳಿಕ ರಾಜೀನಾಮೆಗೆ ಒತ್ತಾಯ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಧರ್ಮೇಂದ್ರ ಪ್ರಧಾನ್, ದೇಶದಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ದೇಶವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳಬಾರದು ಹಾಗೂ ವಿದ್ಯಾರ್ಥಿಗಳು ಕಾನೂನು ಹೋರಾಟಗಳಲ್ಲಿ ಸಿಲುಕದೆ ತಮ್ಮ ಶಿಕ್ಷಣ ಮತ್ತು ವೃತ್ತಿಜೀವನದತ್ತ ಗಮನಹರಿಸಬೇಕೆಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಎರಡು ಪುಟಗಳ ಪತ್ರದಲ್ಲಿ ಅವರು, ನೀಟ್-ಯುಜಿ 2026 ಪರೀಕ್ಷೆಗೆ ಸಂಬಂಧಿಸಿದ ಬೆಳವಣಿಗೆಗಳ ನೈತಿಕ ಹೊಣೆಯನ್ನು ಮೊದಲ ದಿನದಿಂದಲೇ ಹೊತ್ತಿದ್ದಾಗಿ ಹೇಳಿದ್ದಾರೆ. ಮೇ 3ರಂದು ನಡೆದ ಪರೀಕ್ಷೆಯಲ್ಲಿ ಅಕ್ರಮಗಳು ಬೆಳಕಿಗೆ ಬಂದ ತಕ್ಷಣ ತನಿಖೆಯನ್ನು ಸಿಬಿಐಗೆ ವಹಿಸಲಾಗಿದ್ದು, ಪರೀಕ್ಷೆಯನ್ನು ರದ್ದುಪಡಿಸಿ ಜೂನ್ 21ರಂದು ಮರುಪರೀಕ್ಷೆ ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂದಿನ ವರ್ಷದಿಂದ ನೀಟ್ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದೂ ಅವರು ಹೇಳಿದ್ದಾರೆ.

ಜುಲೈ 16ರಂದು ಫಲಿತಾಂಶ ಪ್ರಕಟವಾದ ಬಳಿಕವೂ ಕೆಲವರು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದು ನೋವುಂಟು ಮಾಡಿದೆ ಎಂದು ಪ್ರಧಾನ್ ಹೇಳಿದ್ದಾರೆ. ಇದು ತಮ್ಮ ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆಯಲ್ಲ, ದೇಶದ ಯುವಜನರ ಭವಿಷ್ಯದ ಪ್ರಶ್ನೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನಕ್ಕೆ ಕೃತಜ್ಞತೆ ಸಲ್ಲಿಸಿರುವ ಧರ್ಮೇಂದ್ರ ಪ್ರಧಾನ್, ಮುಂದೆಯೂ ರಾಷ್ಟ್ರಸೇವೆ ಹಾಗೂ ಯುವಜನರ ಹಿತಕ್ಕಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *