ಫಿನ್‌ಟೆಕ್ ನಿಯಮಗಳು ಮತ್ತಷ್ಟು ಕಠಿಣ; ಸೈಬರ್ ಭದ್ರತೆಗೆ ಕೇಂದ್ರ-ಆರ್‌ಬಿಐ ಒತ್ತು

0
rbi-300x190-1

ನವದೆಹಲಿ: ಡಿಜಿಟಲ್ ಹಣಕಾಸು ಸೇವೆಗಳನ್ನು ಹೆಚ್ಚು ಸುರಕ್ಷಿತ ಮತ್ತು ವಿಶ್ವಾಸಾರ್ಹಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಫಿನ್‌ಟೆಕ್ ವಲಯದ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲು ಕ್ರಮ ಕೈಗೊಂಡಿವೆ.

ಡಿಜಿಟಲ್ ಸಾಲ ವೇದಿಕೆಗಳು, ಪಾವತಿ ಸಂಗ್ರಾಹಕರು ಹಾಗೂ ಫಿನ್‌ಟೆಕ್ ಸಂಸ್ಥೆಗಳ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಮಾರುಕಟ್ಟೆ ಶಿಸ್ತನ್ನು ಹೆಚ್ಚಿಸಲು ಹೊಸ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಆರ್‌ಬಿಐ ಫಿನ್‌ಟೆಕ್ ಕ್ಷೇತ್ರಕ್ಕೆ ಸ್ವಯಂ-ನಿಯಂತ್ರಕ ಸಂಸ್ಥೆಗಳ (SRO-FT) ಚೌಕಟ್ಟು ಜಾರಿಗೆ ತಂದಿದ್ದು, ಡಿಜಿಟಲ್ ಪಾವತಿಗಳ ಭದ್ರತೆಯನ್ನು ಬಲಪಡಿಸಿದೆ. ಅಲ್ಲದೆ, ಯುಪಿಐ ವಹಿವಾಟುಗಳಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆ (ML) ಆಧಾರಿತ ವಂಚನೆ ಪತ್ತೆ ವ್ಯವಸ್ಥೆಗಳ ಬಳಕೆಯನ್ನು ಉತ್ತೇಜಿಸಲಾಗಿದೆ.

ಡೇಟಾ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ (DPDP) ಕಾಯ್ದೆ-2023 ಹಾಗೂ ಸಂಬಂಧಿತ ನಿಯಮಗಳನ್ನು ಜಾರಿಗೆ ತಂದಿದೆ. ಆರ್‌ಬಿಐ ತನ್ನ ನಿಯಂತ್ರಕ ಸ್ಯಾಂಡ್‌ಬಾಕ್ಸ್ ಮೂಲಕ ಹೊಸ ಹಣಕಾಸು ತಂತ್ರಜ್ಞಾನಗಳ ಪರೀಕ್ಷೆಗೆ ಅವಕಾಶ ನೀಡುತ್ತಿದೆ.

ಸೈಬರ್ ವಂಚನೆ ತಡೆಗಟ್ಟಲು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಮತ್ತು 1930 ಸಹಾಯವಾಣಿ ಮೂಲಕ ದೂರು ದಾಖಲಿಸುವ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಜೊತೆಗೆ, ಡಿಜಿಟಲ್ ಪಾವತಿ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬ್ಯಾಂಕುಗಳು ಮತ್ತು ಆರ್‌ಬಿಐ ವಿಶೇಷ ಅಭಿಯಾನಗಳನ್ನು ನಡೆಸುತ್ತಿವೆ.

ಈ ಮಾಹಿತಿಯನ್ನು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *