ಚಂಪಾರಣ್‌ನಲ್ಲಿ ಭೀಕರ ಅಪಘಾತ: ಬಸ್ ಹರಿದು 5 ಮಂದಿ ಸಾವು, 5 ಜನರಿಗೆ ಗಂಭೀರ ಗಾಯ

0
accident-300x175-1-2

ಬಿಹಾರದ ಚಂಪಾರಣ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 727ರಲ್ಲಿ ಶುಕ್ರವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ರಸ್ತೆ ಬದಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಜನರ ಮೇಲೆ ಅತಿವೇಗವಾಗಿ ಬಂದ ಬಸ್ ಹರಿದಿದೆ. ಘಟನೆಯಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗೋರಖ್‌ಪುರದಿಂದ ಬೆಟ್ಟಿಯಾಗೆ ತೆರಳುತ್ತಿದ್ದ ಬಸ್‌ ಚಾಲಕನ ನಿರ್ಲಕ್ಷ್ಯ ಮತ್ತು ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಎದುರಿನಿಂದ ಗ್ಯಾಸ್ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಟ್ರಕ್ ಬಂದಾಗ ಬಸ್ ಚಾಲಕನ ನಿಯಂತ್ರಣ ತಪ್ಪಿದೆ.

ಮುಖಾಮುಖಿ ಡಿಕ್ಕಿ ತಪ್ಪಿಸಲು ಚಾಲಕ ಏಕಾಏಕಿ ಬಸ್‌ ಅನ್ನು ರಸ್ತೆ ಬದಿಗೆ ತಿರುಗಿಸಿದ್ದು, ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಸೇರಿದ್ದ ಜನರ ಮೇಲೆ ಬಸ್ ಹರಿದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಮೂವರು ಬಳಿಕ ಸಾವನ್ನಪ್ಪಿದ್ದಾರೆ.

ಮೃತರನ್ನು ಸಂಜಯ್ ಮಹತೋ, ಭೋಲಾ ದುಬೆ, ಬಹದ್ದೂರ್ ಮಹತೋ, ದೇವೇಂದ್ರ ದುಬೆ ಮತ್ತು ಚಂಗೂರ್ ರಾಮ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತದ ನಿಖರ ಕಾರಣ ಮತ್ತು ಬಸ್ ಚಾಲಕನ ನಿರ್ಲಕ್ಷ್ಯದ ಕುರಿತು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *