ಮಂಗಳೂರು ರೈಲ್ವೆ ಪ್ರದೇಶ ಅಕ್ಟೋಬರ್ 1ರಿಂದ ಮೈಸೂರು ವಿಭಾಗದ ವ್ಯಾಪ್ತಿಗೆ: ಸಂಸದ ಬ್ರಿಜೇಶ್ ಚೌಟ

ಮಂಗಳೂರು: ಮಂಗಳೂರು ರೈಲ್ವೆ ಪ್ರದೇಶವನ್ನು ಅಕ್ಟೋಬರ್ 1ರಿಂದ ನೈಋತ್ಯ ರೈಲ್ವೆ (SWR) ವಲಯದ ಮೈಸೂರು ವಿಭಾಗದ ವ್ಯಾಪ್ತಿಗೆ ತರಲಾಗುವುದು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಪ್ರಸ್ತುತ ಮಂಗಳೂರು ರೈಲ್ವೆ ಪ್ರದೇಶವು ನೈಋತ್ಯ ರೈಲ್ವೆ ಹಾಗೂ ದಕ್ಷಿಣ ರೈಲ್ವೆ (SR) ವಲಯಗಳ ವ್ಯಾಪ್ತಿಯಲ್ಲಿ ವಿಭಜನೆಯಾಗಿದೆ. ಈ ದೀರ್ಘಕಾಲದ ಬೇಡಿಕೆಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಹಲವು ಬಾರಿ ಪ್ರಸ್ತಾಪಿಸಿದ್ದು, ಇದೀಗ ಬೇಡಿಕೆ ಈಡೇರುತ್ತಿರುವುದಕ್ಕೆ ಸಂತಸವಾಗಿದೆ ಎಂದು ಚೌಟ ‘X’ನಲ್ಲಿ ತಿಳಿಸಿದ್ದಾರೆ.
ರೈಲ್ವೆ ಮಂಡಳಿ ಹೊರಡಿಸಿರುವ ಪತ್ರದ ಪ್ರಕಾರ, ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿರುವ ಉಳ್ಳಾಲ ಸೇರಿದಂತೆ ಮಂಗಳೂರು ಪ್ರದೇಶವನ್ನು SWRನ ಮೈಸೂರು ವಿಭಾಗಕ್ಕೆ ವರ್ಗಾಯಿಸಲಾಗುತ್ತದೆ. ಇದರಿಂದ SWR ಮತ್ತು SR ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಪಡೀಲ್‌ನಿಂದ ಉಳ್ಳಾಲಕ್ಕೆ ಸ್ಥಳಾಂತರಗೊಳ್ಳಲಿದೆ.

ಆದರೆ, ಥೋಕೂರು ನಿಲ್ದಾಣ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ವ್ಯಾಪ್ತಿಯಲ್ಲಿಯೇ ಮುಂದುವರಿಯಲಿದೆ ಹಾಗೂ KRCL ಮತ್ತು SWR ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ.
ವ್ಯಾಪ್ತಿ ಬದಲಾವಣೆಗಳು ಅಕ್ಟೋಬರ್ 1ರಿಂದ ಜಾರಿಗೆ ಬರಲಿದ್ದು, ಈ ಸಂಬಂಧ ಹುದ್ದೆಗಳು ಹಾಗೂ ನಿಯಂತ್ರಣ ವ್ಯವಸ್ಥೆಗಳ ವರ್ಗಾವಣೆ ಸೇರಿದಂತೆ ಅಗತ್ಯ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಳ್ಳುವಂತೆ ರೈಲ್ವೆ ಮಂಡಳಿ ಸೂಚಿಸಿದೆ.
ಮಂಗಳೂರು ರೈಲ್ವೆ ಪ್ರದೇಶ ಒಂದೇ ವಲಯದಡಿ ಬರುವುದರಿಂದ ಆಡಳಿತಾತ್ಮಕ ಅಡೆತಡೆಗಳು ಕಡಿಮೆಯಾಗಲಿದ್ದು, ಪ್ರಯಾಣಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ, ಉತ್ತಮ ಸಮನ್ವಯ ಹಾಗೂ ಕರಾವಳಿ ಕರ್ನಾಟಕದಲ್ಲಿ ರೈಲ್ವೆ ಮೂಲಸೌಕರ್ಯ ಮತ್ತು ಸಂಪರ್ಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ದೊರೆಯಲಿದೆ ಎಂದು ಬ್ರಿಜೇಶ್ ಚೌಟ ಹೇಳಿದ್ದಾರೆ.
