ಅಡ್ಡಂಡ ಕಾರ್ಯಪ್ಪ ಮೇಲಿನ ಹಲ್ಲೆ ಪ್ರಕರಣ: ಕರ್ನಾಟಕದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ ಎಂದ ತೇಜಸ್ವಿ ಸೂರ್ಯ

0
tejaswi-soorya-tejasvi-surya-tejasvi-soorya-1

ಬೆಂಗಳೂರು: ಅಭಿವ್ಯಕ್ತಿ ಸ್ವಾತಂತ್ರ್ಯವು ಸರ್ಕಾರ ನೀಡುವ ಭಿಕ್ಷೆಯಲ್ಲ, ಸಂವಿಧಾನ ನೀಡಿರುವ ಹಕ್ಕು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಹಿರಿಯ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರ ಮೇಲಿನ ಹಲ್ಲೆ ಪ್ರಕರಣವನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ವಿರುದ್ಧ ಅವರು ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, 1975ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಹಕ್ಕುಗಳನ್ನು ಹತ್ತಿಕ್ಕಿದ್ದರು. ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅದೇ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

ಅಂದು ಪತ್ರಿಕೆಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಇಂದು ಕಲಾವಿದರ ಅಭಿವ್ಯಕ್ತಿಗೆ ಅಡ್ಡಿಪಡಿಸಲಾಗುತ್ತಿದೆ. ಅಡ್ಡಂಡ ಕಾರ್ಯಪ್ಪ ಅವರ ಮೇಲೆ ಹಲ್ಲೆ ನಡೆಸಿ, ಮಸಿ ಬಳಿದವರಿಗೆ ಕುಮ್ಮಕ್ಕು ನೀಡುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ವಿಚಾರಗಳನ್ನು ಎದುರಿಸಲಾಗದವರು ಪೊಲೀಸ್ ಅಧಿಕಾರದ ಹಿಂದೆ ಅಡಗುತ್ತಾರೆ. ಪೊಲೀಸ್ ಇಲಾಖೆ ರಾಜಕೀಯ ಪ್ರತಿಷ್ಠೆ ಕಾಪಾಡುವ ವ್ಯವಸ್ಥೆಯಲ್ಲ, ಕಾನೂನು ಮತ್ತು ನ್ಯಾಯವನ್ನು ರಕ್ಷಿಸುವ ಸಂಸ್ಥೆ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಸಂವಿಧಾನ ಯಾವುದೇ ರಾಜಕೀಯ ನಾಯಕನ ಅಣತಿಯಂತೆ ನಡೆಯುವುದಿಲ್ಲ. ಪೊಲೀಸ್ ಇಲಾಖೆಯನ್ನು ಪಕ್ಷದ ಖಾಸಗಿ ಸೇನೆಯಂತೆ ಬಳಸಬಾರದು ಎಂದು ಮುಖ್ಯಮಂತ್ರಿಯನ್ನು ಉದ್ದೇಶಿಸಿ ತೇಜಸ್ವಿ ಸೂರ್ಯ ಟೀಕಿಸಿದ್ದಾರೆ.

ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ ಎಂಬ ತಮ್ಮ ಆರೋಪವನ್ನು ಪುನರುಚ್ಚರಿಸಿದ ಅವರು, ಈ ನಡವಳಿಕೆಗೆ ಜನರೇ ಅಂತಿಮ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *