ಶಾಲಾ ಮಕ್ಕಳ ಕಣ್ಣೆದುರೇ ಗುಂಡಿಕ್ಕಿ ಶಿಕ್ಷಕಿಗೆಯ ಹತ್ಯೆ; ಬಳಿಕ ಆರೋಪಿಯೂ ಆತ್ಮಹತ್ಯೆ

0
DElhi-Ambulence-2

ಲಖಿಂಪುರ ಖೇರಿ (ಉತ್ತರ ಪ್ರದೇಶ): ಶಾಲಾ ಮಕ್ಕಳ ಕಣ್ಣೆದುರೇ ಶಿಕ್ಷಕಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ವ್ಯಕ್ತಿಯೊಬ್ಬ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಸೋಮವಾರ ನಡೆದಿದೆ.

ಮೃತ ಶಿಕ್ಷಕಿಯನ್ನು ನಿಷಾತ್ ಫಾತಿಮಾ (26) ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಮೊಹಮ್ಮದ್ ಸೌದ್ ಅನ್ಸಾರಿ (28) ಎಂದು ಗುರುತಿಸಲಾಗಿದೆ. ಶಾಹ್‌ಪುರ ಕೋಠಿ ರಸ್ತೆಯಲ್ಲಿರುವ ಚಿಲ್ಡ್ರನ್ಸ್ ಅಕಾಡೆಮಿ ಶಾಲೆಯಲ್ಲಿ ಬೆಳಗ್ಗೆ 11.30ರ ಸುಮಾರಿಗೆ ಘಟನೆ ನಡೆದಿದೆ.

ಜಿಲ್ಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾರ, ಸೌದ್ ಫಾತಿಮಾಳನ್ನು ಭೇಟಿಯಾಗಲು ಶಾಲೆಗೆ ಬಂದಿದ್ದ. ಮೊದಲು ನೆಲ ಮಹಡಿಯಲ್ಲಿ ಭೇಟಿಯಾದ ಬಳಿಕ ಇಬ್ಬರೂ ಮೊದಲ ಮಹಡಿಗೆ ತೆರಳಿದ್ದರು. ಹಿರಿಯ ಕೆಜಿ ತರಗತಿ ಕೊಠಡಿಯ ಹೊರಗಿನ ಕಾರಿಡಾರ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಸೌದ್ ಚೀಲದಲ್ಲಿದ್ದ ದೇಶೀಯ ಪಿಸ್ತೂಲ್ ಹೊರತೆಗೆದು ಫಾತಿಮಾ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ತಾನೂ ಗುಂಡು ಹಾರಿಸಿಕೊಂಡಿದ್ದಾನೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಫಾತಿಮಾ ಅವರ ಸಹೋದರ ಶಾದಾಬ್ ಅಖ್ತರ್ ನೀಡಿದ ದೂರಿನ ಪ್ರಕಾರ, ಸೌದ್ ಆಕೆಗೆ ಕಿರುಕುಳ ನೀಡುತ್ತಿದ್ದು, ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಕುಟುಂಬದವರು ಸೌದ್‌ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಕಿರುಕುಳ ಮುಂದುವರಿದಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಕೊತ್ವಾಲಿ ಸದರ್ ಪೊಲೀಸರು ಸೌದ್, ಆತನ ತಂದೆ ಖಯೂಮ್ ಅನ್ಸಾರಿ ಮತ್ತು ತಾಯಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 103(1), 61(2) ಅಡಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *