ಕಸ್ತೂರಿ ರಂಗನ್ ವಿಚಾರದಲ್ಲಿ ಪರಿಸರ–ಜನಜೀವನದ ನಡುವೆ ಮಧ್ಯಮ ಮಾರ್ಗ ಅಗತ್ಯ: ಡಾ.ಸಿ.ಟಿ.ರವಿ ಅರ್ಥಪೂರ್ಣ ಸೂತ್ರ

0
CT-RAVI-VIDHANA-PARISHAT

ಕಸ್ತೂರಿರಂಗನ್ ವರದಿ ಬಗ್ಗೆ ಪರಿಸರ ರಕ್ಷಣೆ ಜತೆಗೆ ಜನಜೀವನವೂ ಉಳಿಯಬೇಕು ಎನ್ನುತ್ತಾರೆ ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ.

ಬೆಂಗಳೂರು: ಪಶ್ಚಿಮಘಟ್ಟಗಳ ಪರಿಸರ ಸಂರಕ್ಷಣೆ ಮತ್ತು ಅಲ್ಲಿನ ಜನರ ಬದುಕಿನ ನಡುವೆ ಸಮತೋಲನ ಸಾಧಿಸುವ ಅಗತ್ಯವಿದೆ. ಕಸ್ತೂರಿರಂಗನ್ ವರದಿಯನ್ನು ರಾಜಕೀಯ ದೃಷ್ಟಿಯಿಂದ ನೋಡದೆ, ಪರಿಸರ ಹಾಗೂ ಜನಜೀವನದ ದೃಷ್ಟಿಯಿಂದ ವಸ್ತುನಿಷ್ಠವಾಗಿ ಪರಿಗಣಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಆಗ್ರಹಿಸಿದರು.

ವಿಧಾನ ಪರಿಷತ್ತಿನ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, ಪರಿಸರ ಮತ್ತು ರಾಜ್ಯದ ಜನರ ಹಿತಾಸಕ್ತಿಯ ವಿಚಾರದಲ್ಲಿ ಸರ್ಕಾರ–ವಿಪಕ್ಷ ಎಂಬ ಭೇದವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ನಿರ್ಧಾರ ಕೈಗೊಳ್ಳಬೇಕು ಎಂದರು.

ಗಾಡ್ಗೀಳ್, ಕಸ್ತೂರಿರಂಗನ್ ವರದಿ

ಗಾಡ್ಗೀಳ್ ಸಮಿತಿಯು ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮತೆಯ ಆಧಾರದಲ್ಲಿ ಮೂರು ವಲಯಗಳಾಗಿ ವಿಂಗಡಿಸಲು ಶಿಫಾರಸು ಮಾಡಿತ್ತು. ರಾಜ್ಯಗಳ ವಿರೋಧದ ಹಿನ್ನೆಲೆಯಲ್ಲಿ 2012ರಲ್ಲಿ ಡಾ. ಕೆ. ಕಸ್ತೂರಿರಂಗನ್ ನೇತೃತ್ವದ ಸಮಿತಿ ರಚನೆಯಾಗಿ 2013ರಲ್ಲಿ ವರದಿ ಸಲ್ಲಿಸಿತು. ಪಶ್ಚಿಮಘಟ್ಟದ ಸುಮಾರು 60,000 ಚ.ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಗುರುತಿಸುವ ಪ್ರಸ್ತಾವನೆ ವರದಿಯಲ್ಲಿತ್ತು ಎಂದು ರವಿ ವಿವರಿಸಿದರು.

ಕಸ್ತೂರಿರಂಗನ್ ವರದಿಯಲ್ಲಿ ನೈಸರ್ಗಿಕ ಹಾಗೂ ಸಾಂಸ್ಕೃತಿಕ ಭೂದೃಶ್ಯಗಳನ್ನು ಪ್ರತ್ಯೇಕವಾಗಿ ಗುರುತಿಸುವ ಅಗತ್ಯವಿದ್ದರೂ, ಉಪಗ್ರಹ ಮತ್ತು ವೈಮಾನಿಕ ಸಮೀಕ್ಷೆಯ ಆಧಾರದ ಮೇಲೆ ಪ್ರದೇಶ ಗುರುತಿಸಿರುವುದರಿಂದ ಕೃಷಿ, ತೋಟಗಾರಿಕೆ ಹಾಗೂ ಜನವಸತಿ ಪ್ರದೇಶಗಳೂ ನೈಸರ್ಗಿಕ ವಲಯಕ್ಕೆ ಸೇರುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಗ್ರಾಮವಾರು ಭೌತಿಕ ಸಮೀಕ್ಷೆಗೆ ಒತ್ತಾಯ

ಪಶ್ಚಿಮಘಟ್ಟ ವ್ಯಾಪ್ತಿಯ ಪ್ರತಿ ಗ್ರಾಮ ಹಾಗೂ ಸರ್ವೆ ನಂಬರ್‌ವಾರು ಭೌತಿಕ ಸಮೀಕ್ಷೆ ನಡೆಸಬೇಕು. ಕಂದಾಯ, ಅರಣ್ಯ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ಜಂಟಿ ತಂಡ ರಚಿಸಿ ರಿಸರ್ವ್ ಫಾರೆಸ್ಟ್, ಖಾಸಗಿ ಅರಣ್ಯ, ಕಂದಾಯ, ಕೃಷಿ, ತೋಟಗಾರಿಕೆ ಮತ್ತು ಜನವಸತಿ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕು ಎಂದು ಸಲಹೆ ನೀಡಿದರು.

ಪ್ರತಿ ಗ್ರಾಮದ ಪ್ರತ್ಯೇಕ ನಕ್ಷೆ ಸಿದ್ಧಪಡಿಸಿ ಗ್ರಾಮ ಪಂಚಾಯಿತಿಯಲ್ಲಿ ಪ್ರದರ್ಶಿಸಬೇಕು. ಸಾರ್ವಜನಿಕರಿಂದ ಆಕ್ಷೇಪಣೆ ಪಡೆದು, ಗ್ರಾಮಸಭೆಯ ಒಪ್ಪಿಗೆಯ ಬಳಿಕವೇ ಅಂತಿಮ ನಕ್ಷೆಯನ್ನು ಕೇಂದ್ರಕ್ಕೆ ಕಳುಹಿಸಬೇಕು ಎಂದರು.

‘ಬಫರ್ ಝೋನ್’ ಬಗ್ಗೆ ಸ್ಪಷ್ಟನೆ ನೀಡಿ

ಪಶ್ಚಿಮಘಟ್ಟದಲ್ಲಿ 10 ಕಿ.ಮೀ. ಬಫರ್ ಝೋನ್ ಇರಲಿದೆ ಎಂಬ ಆತಂಕ ಜನರಲ್ಲಿ ಇದೆ. ಕಸ್ತೂರಿರಂಗನ್ ವರದಿಯಲ್ಲಿ ನಿಜವಾಗಿಯೂ ಬಫರ್ ಝೋನ್ ಪ್ರಸ್ತಾಪಿಸಲಾಗಿದೆಯೇ, ರಾಜ್ಯ ಸರ್ಕಾರದ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ರವಿ ಒತ್ತಾಯಿಸಿದರು.

ಸಂಪರ್ಕ ರಸ್ತೆಗಳು, ಕೃಷಿ, ವಸತಿ ಹಾಗೂ ಅಗತ್ಯ ಮೂಲಸೌಕರ್ಯಗಳಿಗೆ ನಿರ್ಬಂಧ ಉಂಟಾಗದಂತೆ ಸಾಂಸ್ಕೃತಿಕ ವಲಯವನ್ನು ಗುರುತಿಸಬೇಕು. ಮುಂದಿನ 100 ವರ್ಷಗಳ ಜನಸಂಖ್ಯೆ ಹಾಗೂ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕು ಎಂದರು.

ಸರ್ಕಾರಕ್ಕೆ ನಾಲ್ಕು ಸಲಹೆ

ಜನರ ಆತಂಕ ನಿವಾರಿಸಲು ಸರ್ಕಾರ ನಾಲ್ಕು ಕ್ರಮ ಕೈಗೊಳ್ಳಬೇಕು ಎಂದು ರವಿ ಹೇಳಿದರು. ಪ್ರಸ್ತುತ ಅಧಿಸೂಚನೆಗೆ ತಡೆಯಾಜ್ಞೆ ತರಬೇಕು; ಕೇರಳ ಮಾದರಿಯಲ್ಲಿ ಭೌತಿಕ ಸಮೀಕ್ಷೆ ನಡೆಸಬೇಕು; ನೈಸರ್ಗಿಕ ಮತ್ತು ಸಾಂಸ್ಕೃತಿಕ ವಲಯಗಳನ್ನು ಪ್ರತ್ಯೇಕಿಸಬೇಕು; ಸಾಂಸ್ಕೃತಿಕ ವಲಯದಲ್ಲಿ ಅನುಮತಿಸುವ ಮತ್ತು ನಿರ್ಬಂಧಿಸುವ ಚಟುವಟಿಕೆಗಳ ಕುರಿತು ಸ್ಪಷ್ಟ ಮಾರ್ಗಸೂಚಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

“ಪರಿಸರವೂ ಉಳಿಯಬೇಕು, ಜನಜೀವನವೂ ಉಳಿಯಬೇಕು. ಎರಡರ ನಡುವೆ ಸಮತೋಲನ ಸಾಧಿಸುವ ಮಧ್ಯಮ ಮಾರ್ಗವನ್ನು ಅನುಸರಿಸಬೇಕು” ಎಂದು ಡಾ. ರವಿ ಸಿ.ಟಿ. ಪ್ರತಿಪಾದಿಸಿದರು.

Leave a Reply

Your email address will not be published. Required fields are marked *