ನ. 2ರಿಂದ ಇಂದೋರ್ನಲ್ಲಿ ಆರ್ಎಸ್ಎಸ್ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸಭೆ

ಭೋಪಾಲ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸಭೆ ನವೆಂಬರ್ 2ರಿಂದ 4ರವರೆಗೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆಯಲಿದೆ. ಸಂಘದ ಪ್ರಮುಖ ನಿರ್ಧಾರ ಕೈಗೊಳ್ಳುವ ಸಂಸ್ಥೆಗಳಲ್ಲಿ ಒಂದಾಗಿರುವ ಈ ಸಭೆಯಲ್ಲಿ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಆರು ಸಹ-ಸರ್ಕಾರ್ಯವಾಹರು, ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯರು, ದೇಶದ 46 ಪ್ರಾಂತಗಳ ಪ್ರಮುಖ ಪದಾಧಿಕಾರಿಗಳು ಹಾಗೂ 11 ಕ್ಷೇತ್ರಗಳ ಸಂಘಚಾಲಕರು, ಕಾರ್ಯವಾಹರು ಮತ್ತು ಪ್ರಚಾರಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಘದ ಶತಮಾನೋತ್ಸವ ವರ್ಷದ ಕಾರ್ಯಕ್ರಮಗಳ ನಂತರ ನಡೆಯುತ್ತಿರುವ ಈ ಸಭೆಯಲ್ಲಿ ಇದುವರೆಗೆ ಕೈಗೊಂಡ ಚಟುವಟಿಕೆಗಳ ಸಮಗ್ರ ಪರಾಮರ್ಶೆ ನಡೆಸುವ ನಿರೀಕ್ಷೆಯಿದೆ.

ಮೋಹನ್ ಭಾಗವತ್ ಅವರು ವಿಜಯದಶಮಿ ಭಾಷಣದಲ್ಲಿ ಪ್ರಸ್ತಾಪಿಸಿದ್ದ ವಿಷಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಸಂಘಟನೆಯ ಮುಂದಿನ ಕಾರ್ಯಯೋಜನೆ, ಆದ್ಯತೆಗಳು, ವ್ಯಾಪ್ತಿ ವಿಸ್ತರಣೆ ಹಾಗೂ ವೈಚಾರಿಕ ಚಟುವಟಿಕೆಗಳನ್ನು ಬಲಪಡಿಸುವ ಕುರಿತು ಸಮಾಲೋಚನೆ ನಡೆಯಲಿದೆ.
ಇದರ ಜತೆಗೆ, ಹೊಸ ಮಾಧ್ಯಮ ವೇದಿಕೆಗಳಲ್ಲಿ ಎದುರಾಗುತ್ತಿರುವ ಸವಾಲುಗಳು, ದೇಶದಲ್ಲಿ ಹೆಚ್ಚುತ್ತಿರುವ ಮಾದಕವಸ್ತು ದುರ್ಬಳಕೆ, ಭಾರತದ ಆಂತರಿಕ ವ್ಯವಹಾರಗಳಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತ ಆತಂಕ ಹಾಗೂ ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಯ ಬಗ್ಗೆಯೂ ಚರ್ಚಿಸುವ ಸಾಧ್ಯತೆಯಿದೆ. ಸಾಮಾಜಿಕ ಮತ್ತು ರಾಷ್ಟ್ರೀಯ ಸವಾಲುಗಳನ್ನು ಎದುರಿಸಲು ಸಂಘಟನೆಯ ಮುಂದಿನ ಕಾರ್ಯತಂತ್ರ ರೂಪಿಸುವುದು ಸಭೆಯ ಪ್ರಮುಖ ಉದ್ದೇಶಗಳಲ್ಲೊಂದಾಗಿದೆ.
