ಟಿಬೆಟ್‌ನಲ್ಲಿ ಭೀಕರ ಭೂಕಂಪ: 16 ಮಂದಿ ಸಾವು, 54ಕ್ಕೂ ಹೆಚ್ಚು ಜನರಿಗೆ ಗಾಯ

0
Mountain-Rescue-Amid-the-Ruins-300x224-1

ಬೀಜಿಂಗ್: ಟಿಬೆಟ್‌ನ ಉತ್ತರದ ಪರ್ವತ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ 7.0 ತೀವ್ರತೆಯ ಪ್ರಬಲ ಭೂಕಂಪಕ್ಕೆ ಕನಿಷ್ಠ 16 ಮಂದಿ ಮೃತಪಟ್ಟಿದ್ದು, 54ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆಗೆ ನೂರಾರು ಮನೆಗಳು ಕುಸಿದಿದ್ದು, ಸಂತ್ರಸ್ತರ ರಕ್ಷಣೆಗೆ ಚೀನಾ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

ಭೂಕಂಪದಿಂದ ಕನಿಷ್ಠ 339 ಮನೆಗಳು ಹಾಗೂ ಜಾನುವಾರುಗಳಿಗಾಗಿ ನಿರ್ಮಿಸಿದ್ದ 20 ಕೊಟ್ಟಿಗೆಗಳು ಕುಸಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದ್ದು, ಗಾಯಾಳುಗಳಿಗೆ ವೈದ್ಯಕೀಯ ನೆರವು ಒದಗಿಸಲಾಗುತ್ತಿದೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಸ್ಥಳೀಯ ಕಾಲಮಾನ ಗುರುವಾರ ರಾತ್ರಿ 10.33ಕ್ಕೆ ಭೂಕಂಪ ಸಂಭವಿಸಿದೆ. ಟಿಬೆಟ್‌ನ ನಾಗ್ಚು ನಗರದ ಪೂರ್ವ-ಈಶಾನ್ಯಕ್ಕೆ 191 ಕಿಲೋಮೀಟರ್ ದೂರದಲ್ಲಿ, ಭೂಮಿಯ ಮೇಲ್ಮೈಯಿಂದ ಸುಮಾರು 18 ಕಿಲೋಮೀಟರ್ ಆಳದಲ್ಲಿ ಕಂಪನದ ಕೇಂದ್ರಬಿಂದು ಪತ್ತೆಯಾಗಿದೆ.

ಭೂಕಂಪದ ಬಳಿಕ 4.3ರಿಂದ 5.2 ತೀವ್ರತೆಯ ಕನಿಷ್ಠ ಏಳು ಕಂಪನಗಳು ಸಂಭವಿಸಿವೆ. ಇವುಗಳ ಕೇಂದ್ರಗಳು ಸುಮಾರು 10 ಕಿಲೋಮೀಟರ್ ಆಳದಲ್ಲಿದ್ದವು ಎಂದು ಅಮೆರಿಕದ ಸಂಸ್ಥೆ ತಿಳಿಸಿದೆ. ಟಿಬೆಟ್‌ನ ರಾಜಧಾನಿ ಲಹಾಸಾದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.

ರಕ್ಷಣಾ ಕಾರ್ಯಕ್ಕೆ 1,600ಕ್ಕೂ ಹೆಚ್ಚು ಸಿಬ್ಬಂದಿ

ದುರಂತ ಪೀಡಿತ ಪ್ರದೇಶದಲ್ಲಿ 1,600ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ, ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಂತ್ರಸ್ತರಿಗೆ ನೆರವಾಗಲು 1,000 ತಾತ್ಕಾಲಿಕ ವಸತಿ ಘಟಕಗಳು, ಸುಮಾರು 3,000 ಡೇರೆಗಳು, ಮಡಚಬಹುದಾದ ಹಾಸಿಗೆಗಳು, ಕೈದೀಪಗಳು ಹಾಗೂ ಚಳಿಗಾಲದ ಉಡುಪುಗಳನ್ನು ರವಾನಿಸಲಾಗಿದೆ.

ಚೀನಾದ ಅಧಿಕೃತ ಸುದ್ದಿಸಂಸ್ಥೆ ಕ್ಸಿನ್‌ಹುವಾ ವರದಿ ಪ್ರಕಾರ, ಭೂಕಂಪದಿಂದ ಕೆಲವು ಪ್ರದೇಶಗಳಲ್ಲಿ ದೂರಸಂಪರ್ಕ ವ್ಯವಸ್ಥೆ ಸ್ಥಗಿತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಭೂಕಂಪ ಪೀಡಿತ ಪ್ರದೇಶದ ಮೂಲಕ ಹಾದುಹೋಗುವ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬಂಡೆಗಳು ಉರುಳಿಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 317ರ ಒಂದು ಭಾಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ರಸ್ತೆ ತೆರವು ಕಾರ್ಯ ನಡೆಯುತ್ತಿದ್ದು, ತುರ್ತು ಸೇವೆ ಮತ್ತು ರಕ್ಷಣಾ ಕಾರ್ಯಾಚರಣೆಯ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಹಿಮಪಾತದ ಮುನ್ಸೂಚನೆ: ಹೆಚ್ಚಿದ ಆತಂಕ

ಭೂಕಂಪ ಪೀಡಿತ ಪ್ರದೇಶದಲ್ಲಿ ಮುಂದಿನ ಮೂರು ದಿನಗಳಲ್ಲಿ ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತೀವ್ರ ಚಳಿ ಮತ್ತು ಹಿಮಪಾತವು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುವ ಆತಂಕ ಎದುರಾಗಿದೆ. ಈಗಾಗಲೇ ಮನೆ ಕಳೆದುಕೊಂಡು ನಿರಾಶ್ರಿತರಾಗಿರುವ ಜನರ ಸಂಕಷ್ಟ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಹಾಗೂ ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಈ ಪ್ರದೇಶದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪ ಇದಾಗಿದೆ ಎಂದು ಚೀನಾದ ಸರ್ಕಾರಿ ಪ್ರಸಾರ ಸಂಸ್ಥೆ ಸಿಸಿಟಿವಿ ವರದಿ ಮಾಡಿದೆ.

Leave a Reply

Your email address will not be published. Required fields are marked *