13 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಘೋಷಿಸಿದ ಪವನ್ ಕಲ್ಯಾಣ್, ಅನ್ನಾ ಲೆಜ್ನೆವಾ

0
PawanKalyan-Konidala-wife-Anna-Konidala-Anna-Lezhneva

ಹೈದರಾಬಾದ್: ತೆಲುಗು ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಅವರ ಪತ್ನಿ ಅನ್ನಾ ಲೆಜ್ನೆವಾ ತಮ್ಮ 13 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. ಪರಸ್ಪರ ಒಪ್ಪಿಗೆ ಮತ್ತು ಗೌರವದೊಂದಿಗೆ ದೂರವಾಗುತ್ತಿರುವುದಾಗಿ ದಂಪತಿ ಪ್ರಕಟಿಸಿದ್ದಾರೆ.

2013ರ ಸೆಪ್ಟೆಂಬರ್‌ನಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ಪವನ್ ಕಲ್ಯಾಣ್ ಅವರು ರಷ್ಯಾ ಮೂಲದ ಅನ್ನಾ ಲೆಜ್ನೆವಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಪೋಲೆನಾ ಅಂಜನಾ ಪವನ್‌ವಾ ಮತ್ತು ಮಾರ್ಕ್ ಶಂಕರ್ ಪವನ್‌ವಿಚ್ ಎಂಬ ಇಬ್ಬರು ಮಕ್ಕಳಿದ್ದಾರೆ.

ದಾಂಪತ್ಯ ಜೀವನ ಅಂತ್ಯಗೊಂಡರೂ ಉತ್ತಮ ಸ್ನೇಹಿತರಾಗಿ ಮುಂದುವರಿಯಲಿದ್ದೇವೆ. ಮಕ್ಕಳ ಸಂತೋಷ, ಭವಿಷ್ಯ ಮತ್ತು ಹಿತಾಸಕ್ತಿಯೇ ತಮ್ಮ ಮೊದಲ ಆದ್ಯತೆಯಾಗಿರಲಿದೆ ಎಂದು ದಂಪತಿ ತಿಳಿಸಿದ್ದಾರೆ. ಈ ವೈಯಕ್ತಿಕ ನಿರ್ಧಾರವನ್ನು ಗೌರವಿಸುವಂತೆ ಅಭಿಮಾನಿಗಳು ಹಾಗೂ ಹಿತೈಷಿಗಳಲ್ಲಿ ಮನವಿ ಮಾಡಿದ್ದಾರೆ.

ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಅನ್ನಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ಅಳಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಹಿತೈಷಿಗಳಲ್ಲಿ ಅಚ್ಚರಿ ಮೂಡಿಸಿದೆ.

ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ಪವನ್ ಕಲ್ಯಾಣ್ ಅವರ ಜನ್ಮದಿನದಂದು ಅನ್ನಾ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದರು. ಹೀಗಾಗಿ ದಂಪತಿಯ ಪ್ರತ್ಯೇಕತೆಯ ನಿರ್ಧಾರ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ.

Leave a Reply

Your email address will not be published. Required fields are marked *