ಪರ ಧರ್ಮಗಳ ಬಗ್ಗೆ ಮುಕ್ತ ಮನೋಭಾವ: ಮುಸ್ಲಿಂ ವಿದ್ವಾಂಸರಿಂದ ಸಹಿಷ್ಣುತೆಯ ಪಾಠ

0
Communal Harmony

ಇತಿಹಾಸದುದ್ದಕ್ಕೂ ಮುಸ್ಲಿಂ ವಿದ್ವಾಂಸರು ತಮ್ಮ ಧಾರ್ಮಿಕ ನಂಬಿಕೆಗಳಿಗೆ ಬದ್ಧರಾಗಿದ್ದರೂ, ಇತರ ಧರ್ಮಗಳು ಮತ್ತು ಸಂಸ್ಕೃತಿಗಳ ಬಗ್ಗೆ ಗೌರವ ಹಾಗೂ ಮುಕ್ತ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ವಿಭಿನ್ನ ಧರ್ಮಗಳ ಮೂಲ ಗ್ರಂಥಗಳನ್ನು ಅಧ್ಯಯನ ಮಾಡಲು ಸಂಸ್ಕೃತ, ಹೀಬ್ರೂ, ಗ್ರೀಕ್, ಚಾಲ್ಡಿಯನ್, ಪಜಂದ್ ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳನ್ನು ಕಲಿತಿದ್ದಾರೆ. ಅವರ ಈ ಪ್ರಯತ್ನಗಳು ಅಂತರಧರ್ಮದ ಸಾಮರಸ್ಯ ಮತ್ತು ಬೌದ್ಧಿಕ ಮುಕ್ತತೆಗೆ ಮಾದರಿಯಾಗಿವೆ.

ಮೌಲಾನಾ ಇನಾಯತ್ ರಸೂಲ್ ಚಿರ್ಯಕೋಟಿ ಹೀಬ್ರೂ ಭಾಷೆ ಕಲಿಯುವ ಆಸೆಯಿಂದ ಕಲ್ಕತ್ತಾಗೆ ತೆರಳಿದ್ದರು. ಆರಂಭದಲ್ಲಿ ಶಿಕ್ಷಕರು ಸಿಗದೆ ತೊಂದರೆ ಅನುಭವಿಸಿದ ಅವರು, ಕ್ರಿಶ್ಚಿಯನ್ ವಿದ್ವಾಂಸರ ಸಲಹೆಯಂತೆ ಇಂಗ್ಲಿಷ್ ಕಲಿತು ಬಳಿಕ ಹೀಬ್ರೂ ಅಧ್ಯಯನ ಆರಂಭಿಸಿದರು. ಮೂರು ವರ್ಷಗಳ ಅಧ್ಯಯನದ ಬಳಿಕ ಹೀಬ್ರೂ ಭಾಷೆಯಲ್ಲಿ ಪರಿಣತಿ ಪಡೆದ ಅವರು ಚಾಲ್ಡಿಯನ್ ಮತ್ತು ಗ್ರೀಕ್ ಭಾಷೆಗಳನ್ನೂ ಕಲಿತರು. ಪ್ರವಾದಿ ಇಸ್ಮಾಯಿಲ್ ಅವರ ತಾಯಿ ಹಜರತ್ ಹಜ್ರಾ ಕುರಿತ ಸಂಶೋಧನೆಯಲ್ಲಿ ಹೀಬ್ರೂ ಉಲ್ಲೇಖಗಳನ್ನು ಬಳಸಿದರು. ಈ ಕೃತಿಯನ್ನು ಸರ್ ಸೈಯದ್ ಅಹ್ಮದ್ ಖಾನ್ ತಮ್ಮ ‘ಖುತ್ಬತ್-ಎ-ಅಹ್ಮದಿಯ’ ಪುಸ್ತಕದಲ್ಲಿ ಪ್ರಕಟಿಸಿದರು.

ಶಾ ಅಬ್ದುಲ್ ಅಜೀಜ್ (1746–1823) ಕೂಡ ಅನುವಾದಗಳ ಬದಲಿಗೆ ಮೂಲ ಹೀಬ್ರೂ ಭಾಷೆಯಲ್ಲೇ ಟೋರಾ ಅಧ್ಯಯನ ಮಾಡಿದ್ದರು. ದೆಹಲಿಗೆ ಬಂದಿದ್ದ ಹೀಬ್ರೂ ಭಾಷಿಕರೊಬ್ಬರಿಂದ ಈ ಅವಕಾಶ ಪಡೆದಿದ್ದರು.

ಖಾಜಿ ಗುಲಾಮ್ ಮಖ್ದೂಮ್ ಚಿರ್ಯಕೋಟಿ ಸಂಸ್ಕೃತ ಕಲಿಯಲು ಬನಾರಸ್‌ಗೆ ಪ್ರಯಾಣಿಸಿದ್ದರು. ಮೌಲಾನಾ ನುಸ್ರತ್ ಅಲಿ ಖಾನ್ ಡೆಹ್ಲವಿ ಪರ್ಷಿಯನ್, ಅರೇಬಿಕ್, ಟರ್ಕಿಶ್, ಇಂಗ್ಲಿಷ್ ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳನ್ನು ಕಲಿತಿದ್ದರು. ಮೌಲ್ವಿ ನಜಾಫ್ ಅಲಿ ಪಜಂದ್ ಭಾಷೆ ಅಧ್ಯಯನ ಮಾಡಿ, ಝೋರಾಸ್ಟ್ರಿಯನ್ ಧಾರ್ಮಿಕ ಗ್ರಂಥ ‘ದಸಾತಿರ್’ ಕುರಿತು ‘ವೈಮಾಜ್’ ಎಂಬ ವ್ಯಾಖ್ಯಾನ ಬರೆದಿದ್ದರು.

ಈ ವಿದ್ವಾಂಸರ ಜೀವನವು ಧಾರ್ಮಿಕ ನಂಬಿಕೆ ಮತ್ತು ಇತರ ಧರ್ಮಗಳ ಗೌರವ ಪರಸ್ಪರ ವಿರೋಧಿಗಳಲ್ಲ ಎಂಬುದನ್ನು ಸಾರುತ್ತದೆ. ಸ್ವಂತ ನಂಬಿಕೆಗೆ ಬದ್ಧರಾಗಿರುವುದರ ಜೊತೆಗೆ ಇತರರ ಧರ್ಮ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದೂ ಸಾಧ್ಯ ಎಂಬ ಅವರ ಸಂದೇಶ ಇಂದಿನ ಸಮಾಜಕ್ಕೆ ಮಹತ್ವದ ಪಾಠವಾಗಿದೆ. ಧಾರ್ಮಿಕ ವಿಭಜನೆ ಮತ್ತು ಪೂರ್ವಾಗ್ರಹಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಪರಸ್ಪರ ಗೌರವ ಹಾಗೂ ಸಹಬಾಳ್ವೆಗೆ ಇಂತಹ ಆದರ್ಶಗಳು ದಾರಿದೀಪವಾಗಿವೆ.

  • (ಲೇಖಕರು: ಡಾ. ಜಫರ್ ದಾರಿಕ್ ಖಾಸ್ಮಿ- ಇಸ್ಲಾಮಿಕ್ ವಿದ್ವಾಂಸರು, ಲೇಖಕರು ಹಾಗೂ ‘ನ್ಯೂ ​​ಏಜ್ ಇಸ್ಲಾಂ’ ಅಂಕಣಕಾರರು)

Leave a Reply

Your email address will not be published. Required fields are marked *

You may have missed