ಕ್ಷೇತ್ರ ಮರುವಿಂಗಡಣೆಯಿಂದ ಕರ್ನಾಟಕದ ರಾಜಕೀಯ ಪ್ರಾತಿನಿಧ್ಯಕ್ಕೆ ಅಪಾಯ: ಪರಮೇಶ್ವರ್ ಆತಂಕ

0
G-Parameshwar-1

ಬೆಂಗಳೂರು: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆಯಿಂದ ಕರ್ನಾಟಕದ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆಯಾಗುವ ಆತಂಕವಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದ್ದಾರೆ.

ಲೋಕಸಭಾ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸಿದರೆ ಕರ್ನಾಟಕದ ಸ್ಥಾನಗಳು 28ರಿಂದ 42ಕ್ಕೆ ಏರಿಕೆಯಾಗಲಿವೆ. ಆದರೆ, ಉತ್ತರ ಪ್ರದೇಶದ ಸ್ಥಾನಗಳು 80ರಿಂದ 120ಕ್ಕೆ ಹೆಚ್ಚಾಗಲಿವೆ. ಇದರಿಂದ ಎರಡೂ ರಾಜ್ಯಗಳ ನಡುವಿನ ಸ್ಥಾನಗಳ ಅಂತರ 52ರಿಂದ 78ಕ್ಕೆ ಏರಿಕೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಕೇವಲ ಸ್ಥಾನಗಳ ಸಂಖ್ಯೆ ಹೆಚ್ಚಾದರೆ ರಾಜಕೀಯ ಪ್ರಭಾವ ಹೆಚ್ಚಾಗುವುದಿಲ್ಲ. ಸಂಸತ್ತಿನ ಮತದಾನದಲ್ಲಿ ಕರ್ನಾಟಕದ 42 ಸಂಸದರ ಸಂಖ್ಯಾಬಲ ಉತ್ತರ ಪ್ರದೇಶದ 120 ಸಂಸದರ ಬಲಕ್ಕಿಂತ ಕಡಿಮೆಯಾಗಿರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜನಸಂಖ್ಯೆ ನಿಯಂತ್ರಣಕ್ಕೆ ಕರ್ನಾಟಕ ದಶಕಗಳಿಂದ ಕೈಗೊಂಡಿರುವ ಪ್ರಯತ್ನಗಳು ರಾಜಕೀಯವಾಗಿ ಹಿನ್ನಡೆಯಾಗಲು ಕಾರಣವಾಗಬಾರದು. ರಾಜ್ಯದ ರಾಜಕೀಯ ಅಸ್ಮಿತೆ, ಸಾಂವಿಧಾನಿಕ ಹಕ್ಕುಗಳು ಮತ್ತು ಅಭಿವೃದ್ಧಿ ಆಕಾಂಕ್ಷೆಗಳನ್ನು ರಕ್ಷಿಸಲು ನ್ಯಾಯಯುತ ಪ್ರಾತಿನಿಧ್ಯ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.

ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಬೆಂಬಲವಿದೆ. ಆದರೆ, ಕ್ಷೇತ್ರ ಮರುವಿಂಗಡಣೆಗಾಗಿ ಕಾಯದೆ, ಪ್ರಸ್ತುತ ಲೋಕಸಭಾ ಸ್ಥಾನಗಳ ಹಂಚಿಕೆ ಚೌಕಟ್ಟಿನಲ್ಲೇ ಸಾಂವಿಧಾನಿಕ ತಿದ್ದುಪಡಿ ಮೂಲಕ ಮಹಿಳಾ ಮೀಸಲಾತಿ ಜಾರಿಗೊಳಿಸಬೇಕು. ಅದನ್ನು ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಿಂದ ಪ್ರತ್ಯೇಕಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *