ಕನ್ನಡ ತಾಯಿ ಭಾಷೆ, ತುಳು ಮಗಳ ಭಾಷೆ: ಬಂಟರ ಸಂಘದ ‘ತುಳುನಾಡ್ ಜವನರ್ ಬೆಂಗಳೂರು’ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್

0
DKS-Bunts-Sangh-Bengaluru

ಬೆಂಗಳೂರು: ಕನ್ನಡ ನಮ್ಮ ತಾಯಿ ಭಾಷೆಯಾದರೆ, ತುಳು ನಮ್ಮ ಮಗಳ ಭಾಷೆ. ತಾಯಿಭಾಷೆ ಪ್ರತಿಯೊಬ್ಬರಿಗೂ ಅತ್ಯಂತ ಮುಖ್ಯ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಬಂಟರ ಸಂಘದ ‘ತುಳುನಾಡ್ ಜವನರ್ ಬೆಂಗಳೂರು’ ಆಯೋಜಿಸಿದ್ದ 9ನೇ ವರ್ಷದ ‘ತುಳುನಾಡು ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೆಂಗಳೂರಿನಲ್ಲೇ ತುಳುನಾಡಿನ ಅಪ್ಪಟ ಸಂಸ್ಕೃತಿಯನ್ನು ಮರುಸೃಷ್ಟಿಸುವ ಮೂಲಕ ರಾಜಧಾನಿಯಲ್ಲಿರುವ ತುಳುವರು ಮಾತ್ರವಲ್ಲದೆ, ತುಳುವೇತರರಿಗೂ ಕರಾವಳಿಯ ಭಾಷೆ, ಸಂಸ್ಕೃತಿ, ಆಚರಣೆ ಹಾಗೂ ಹಬ್ಬಗಳ ಪರಿಚಯ ಮಾಡಿಕೊಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದರಾದ ತೇಜಸ್ವಿ ಸೂರ್ಯ, ಬ್ರಿಜೇಶ್ ಚೌಟ, ಶಾಸಕರಾದ ಸುನಿಲ್ ಕುಮಾರ್, ಭರತ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಸಮಾಜ ಸೇವಕ ಪ್ರಕಾಶ್ ಶೆಟ್ಟಿ, ಶಾಸಕ ಅಶೋಕ್ ರೈ, ಶಶಿಧರ್ ಶೆಟ್ಟಿ, ಮಾಜಿ ಅಂತರರಾಷ್ಟ್ರೀಯ ಹಾಕಿ ಆಟಗಾರ ಆಶಿಶ್ ಬಲ್ಲಾಳ್, ನಿಕಟಪೂರ್ವ ಬಿಬಿಎಂಪಿ ಸದಸ್ಯ ಕೆ. ಉಮೇಶ್ ಶೆಟ್ಟಿ ಸೇರಿದಂತೆ ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ವೇಳೆ, ಮಾತನಾಡಿದ ಮುಖ್ಯಮಂತ್ರಿ ಶಿವಕುಮಾರ್, “ನನ್ನ ನಂಬಿಕೆ ಇತಿಹಾಸ ನಿರ್ಮಿಸಬೇಕು ಎಂಬುದು. ಬೆಂಗಳೂರುಗಿಂತ ಕರಾವಳಿ ಜ್ಞಾನ, ಪರಿಸರ, ಶಿಕ್ಷಣ ಹಾಗೂ ಧಾರ್ಮಿಕ ಪರಂಪರೆಯಲ್ಲಿ ಶ್ರೀಮಂತವಾಗಿದೆ” ಎಂದರು.

ತುಳು ಭಾಷೆಗೆ ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಕುರಿತು ತಾವು ಈ ಹಿಂದೆ ನೀಡಿದ್ದ ಭರವಸೆಯನ್ನು ಉಲ್ಲೇಖಿಸಿದ ಅವರು, “ಕನ್ನಡ ತಾಯಿ ಭಾಷೆಯಾದರೆ ತುಳು ಅದರ ಮಗಳ ಭಾಷೆ” ಎಂದು ಹೇಳಿದರು.

ತುಳುನಾಡಿನ ಆಧ್ಯಾತ್ಮಿಕ ಪರಂಪರೆಯನ್ನು ಉಲ್ಲೇಖಿಸಿದ ಅವರು, ದೈವ–ದೇವರು, ಭಕ್ತಿ, ದೇವಾಲಯ ಹಾಗೂ ಕಡಲಿನೊಂದಿಗೆ ಕರಾವಳಿಯ ಸಂಸ್ಕೃತಿ ಬೆಸೆದುಕೊಂಡಿದೆ. ಉಡುಪಿಯ ಶ್ರೀಕೃಷ್ಣನಿಗೆ ಕನಕದಾಸರ ಭಕ್ತಿಯನ್ನೂ ಅವರು ಸ್ಮರಿಸಿದರು.

ಕರಾವಳಿ ಪ್ರವಾಸೋದ್ಯಮಕ್ಕೆ ಒತ್ತು

ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಕಡಲತೀರ ಹಾಗೂ ಬಂದರು ಪ್ರದೇಶಗಳ ಅಭಿವೃದ್ಧಿಯೊಂದಿಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು. ಕೇರಳ ಮಾದರಿಯಲ್ಲಿ ಕರಾವಳಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಚಿಂತನೆ ಇದೆ ಎಂದರು.

ಮಲೆನಾಡು ಮತ್ತು ಕರಾವಳಿ ಭಾಗಗಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸುವ ಜೊತೆಗೆ ಸಾಲ ಸೌಲಭ್ಯಗಳ ಅವಧಿ ವಿಸ್ತರಣೆಯ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

‘ರಾಜಕಾರಣ ಶಾಶ್ವತವಲ್ಲ’

“ರಾಜಕಾರಣ ಮುಖ್ಯವಲ್ಲ. ಇಲ್ಲಿ ಯಾರೂ ಶಾಶ್ವತವಲ್ಲ. ಹುಟ್ಟಿದ ಸೂರ್ಯ ಮುಳುಗಲೇಬೇಕು. ನಾವು ಮಾಡುವ ಕೆಲಸ ಮಾತ್ರ ಉಳಿಯುತ್ತದೆ. ಅವಕಾಶ ಸಿಕ್ಕಾಗ ನೀವು ಕೇಳಿದ್ದೀರಿ, ನಾನು ಕೆಲಸ ಮಾಡಿದ್ದೇನೆ” ಎಂದು ಶಿವಕುಮಾರ್ ಹೇಳಿದರು.

ಕರಾವಳಿ ಜನರು ಜ್ಞಾನವಂತರು ಮತ್ತು ಬುದ್ಧಿವಂತರು. ಇದಕ್ಕೆ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನವೇ ಕಾರಣ. ಕರಾವಳಿಯಲ್ಲಿ ಹೆಚ್ಚಿನ ಅವಕಾಶಗಳು ಲಭ್ಯವಿದ್ದರೆ ಅಲ್ಲಿನ ಜನರು ಉದ್ಯೋಗಕ್ಕಾಗಿ ಮುಂಬೈ, ದುಬೈ ಸೇರಿದಂತೆ ಹೊರ ಪ್ರದೇಶಗಳಿಗೆ ತೆರಳುವ ಅಗತ್ಯ ಕಡಿಮೆಯಾಗುತ್ತಿತ್ತು ಎಂದರು.

ಮಂಗಳೂರು ಜಿಲ್ಲೆ ವಿಚಾರ: ಜನಾಭಿಪ್ರಾಯ ಸಂಗ್ರಹ

ಮಂಗಳೂರು ಜಿಲ್ಲೆ ರಚನೆ ಕುರಿತು ಜನಾಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ನೀಡಬಹುದು. ಜನಾಭಿಪ್ರಾಯ ಸಂಗ್ರಹಿಸಿದ ಬಳಿಕ ಜಿಲ್ಲೆ ರಚನೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ತುಳುನಾಡ್ ಜವನರ್ ಬೆಂಗಳೂರು ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಶಿಕ್ಷಣ ತಜ್ಞ ಉಪೇಂದ್ರ ಶೆಟ್ಟಿ, ನಟ ಶಿವಧ್ವಜ್, ಬಂಟರ ಸಂಘದ ಅಧ್ಯಕ್ಷ ದೀಪಕ್ ಶೆಟ್ಟಿ, ಗೌರವಾಧ್ಯಕ್ಷ ಉತ್ತಮ್ ಶೆಟ್ಟಿ, ರವಿ ಕಟ್ಟಪಾಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed