ಐಎನ್ಎಸ್ ಸಹ್ಯಾದ್ರಿ ವಿಯೆಟ್ನಾಂ ಬಂದರು ಭೇಟಿ ಪೂರ್ಣ; ಕಡಲ ಸಹಕಾರ ಬಲವರ್ಧನೆ

ನವದೆಹಲಿ: ಭಾರತೀಯ ನೌಕಾಪಡೆಯ ಸ್ಥಳೀಯವಾಗಿ ನಿರ್ಮಿಸಲಾದ ಮಾರ್ಗದರ್ಶಿ ಕ್ಷಿಪಣಿ ರಹಸ್ಯ ಯುದ್ಧನೌಕೆ ಐಎನ್ಎಸ್ ಸಹ್ಯಾದ್ರಿ, ನವೆಂಬರ್ 20ರಿಂದ 22ರವರೆಗೆ ವಿಯೆಟ್ನಾಂನ ಡಾ ನಾಂಗ್ಗೆ ಕೈಗೊಂಡಿದ್ದ ಬಂದರು ಭೇಟಿಯನ್ನು ಪೂರ್ಣಗೊಳಿಸಿದೆ. ದೂರದ ಪೂರ್ವದಲ್ಲಿನ ಕಾರ್ಯಾಚರಣೆಯ ನಿಯೋಜನೆಯ ಭಾಗವಾಗಿ ಈ ಭೇಟಿ ನಡೆದಿದೆ.
ಈ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯ ಸಿಬ್ಬಂದಿ ವಿಯೆಟ್ನಾಂ ಪೀಪಲ್ಸ್ ನೇವಿಯೊಂದಿಗೆ ವೃತ್ತಿಪರ ಮತ್ತು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಹಿರಿಯ ನೌಕಾ ಅಧಿಕಾರಿಗಳೊಂದಿಗೆ ಸಭೆ, ಎರಡೂ ನೌಕಾಪಡೆಗಳ ಸಿಬ್ಬಂದಿಗಳ ಪರಸ್ಪರ ಭೇಟಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಈ ಚಟುವಟಿಕೆಗಳು ಉಭಯ ನೌಕಾಪಡೆಗಳ ನಡುವಿನ ವೃತ್ತಿಪರ ಸಂಬಂಧ, ಪರಸ್ಪರ ನಂಬಿಕೆ ಮತ್ತು ಸೌಹಾರ್ದತೆಯನ್ನು ಹೆಚ್ಚಿಸುವ ಗುರಿ ಹೊಂದಿದ್ದವು.
ಈ ಭೇಟಿ ಭಾರತ-ವಿಯೆಟ್ನಾಂ ಕಡಲ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಿದ್ದು, ಭಾರತದ ‘ಆಕ್ಟ್ ಈಸ್ಟ್’ ನೀತಿ ಮತ್ತು ‘ಮಹಾಸಾಗರ್’ ದೃಷ್ಟಿಕೋನದಡಿ ಸ್ನೇಹಪರ ರಾಷ್ಟ್ರಗಳ ನೌಕಾಪಡೆಗಳೊಂದಿಗೆ ಸಂಬಂಧ ವೃದ್ಧಿಸುವ ಭಾರತೀಯ ನೌಕಾಪಡೆಯ ಪ್ರಯತ್ನವನ್ನು ಪ್ರತಿಬಿಂಬಿಸಿದೆ.
