57ನೇ IFFI: ಮಾನವ-ವನ್ಯಜೀವಿ ಸಹಬಾಳ್ವೆಯ ಸಂದೇಶ ಸಾರಿದ ತಮಿಳು ಚಿತ್ರ ‘ಕೂಡು’

0
Koodu-movie-in-IFFI-2026

ಪಣಜಿ: ಮಾನವ ಮತ್ತು ವನ್ಯಜೀವಿಗಳ ನಡುವಿನ ಸಹಬಾಳ್ವೆ ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ತಮಿಳು ಚಲನಚಿತ್ರ ‘ಕೂಡು’, 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಅಂಗವಾಗಿ ಗಮನ ಸೆಳೆಯಿತು.

ಚಿತ್ರದ ನಿರ್ದೇಶಕ ಜೋಯಲ್ ವಿಜಯ್, ನಿರ್ಮಾಪಕರಾದ ರಾಜೇಶ್ ಮೆನನ್ ಮತ್ತು ಗಣೇಶ್ ಎಂ. ಹಾಗೂ ನಟ ವಿ. ಜಯಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕಥೆ ಮತ್ತು ಸಂದೇಶದ ಕುರಿತು ಮಾತನಾಡಿದರು.

ತಮಿಳುನಾಡಿನ ವಚತಿ ಗ್ರಾಮದಲ್ಲಿ ನಡೆಯುವ ಈ ಕಥೆ, ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಲ್ಲಿ ಮೊಟ್ಟೆಗಳಿರುವ ಗುಬ್ಬಚ್ಚಿಯ ಗೂಡು ಪತ್ತೆಯಾಗುವುದರೊಂದಿಗೆ ಆರಂಭವಾಗುತ್ತದೆ. ಗ್ರಾಮದ ಮುಖಂಡ ಅಗತಿಯನ್ ಮಾರ್ಗದರ್ಶನದಲ್ಲಿ ಕೃಷಿ ಪದವೀಧರ ಕದಿರ್ ಮತ್ತು ಗ್ರಾಮಸ್ಥರು ಪಕ್ಷಿಗಳನ್ನು ರಕ್ಷಿಸಲು 35 ದಿನಗಳ ಕಾಲ ವಿದ್ಯುತ್ ಇಲ್ಲದೆ ಬದುಕಲು ನಿರ್ಧರಿಸುತ್ತಾರೆ. ತೀವ್ರ ವಿರೋಧದ ನಡುವೆಯೂ ಗೂಡಿನ ಸುರಕ್ಷತೆಗಾಗಿ ಅವರು ತ್ಯಾಗಕ್ಕೆ ಸಿದ್ಧರಾಗುತ್ತಾರೆ.

ಭೂಮಿ ಕೇವಲ ಮನುಷ್ಯರಿಗೆ ಮಾತ್ರವಲ್ಲ, ಅಸಂಖ್ಯಾತ ಜೀವಿಗಳಿಗೂ ಸೇರಿದೆ. ಇತರ ಜೀವಿಗಳನ್ನು ಗೌರವಿಸಿ, ರಕ್ಷಿಸುವುದರೊಂದಿಗೆ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವುದು ಅಗತ್ಯ ಎಂದು ನಿರ್ದೇಶಕ ಜೋಯಲ್ ವಿಜಯ್ ಹೇಳಿದರು.

ನೈಜ ಘಟನೆಯಿಂದ ಪ್ರೇರಿತವಾದ ಕಥೆ ಕೇಳಿದ ಕೆಲವೇ ನಿಮಿಷಗಳಲ್ಲಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾಗಿ ವಿ. ಜಯಪ್ರಕಾಶ್ ತಿಳಿಸಿದರು. ಚಿತ್ರವು ಟಿಶ್ಯೂ ಪೇಪರ್ ಬಳಕೆ ಮತ್ತು ಮರ ಕಡಿಯುವಿಕೆಯ ನಡುವಿನ ಸಂಬಂಧದ ಬಗ್ಗೆ ಜಾಗೃತಿ ಮೂಡಿಸಿ, ಅದರ ಬಳಕೆ ಕಡಿಮೆ ಮಾಡಲು ಪ್ರೇರೇಪಿಸಿದೆ ಎಂದರು.

ಚಿತ್ರಕಥೆಯು ಗಂಭೀರ ಉಪದೇಶದ ಬದಲಾಗಿ ಅರ್ಥಪೂರ್ಣ ಸಂಭಾಷಣೆ ಮತ್ತು ಸರಳ ಸನ್ನಿವೇಶಗಳ ಮೂಲಕ ಪರಿಸರ ಸಂದೇಶವನ್ನು ತಲುಪಿಸುತ್ತದೆ ಎಂದು ನಿರ್ಮಾಪಕ ರಾಜೇಶ್ ಮೆನನ್ ಹೇಳಿದರು. 35 ದಿನಗಳ ಕಾಲ ವಿದ್ಯುತ್ ಇಲ್ಲದೆ ಬದುಕುವ ಗ್ರಾಮಸ್ಥರ ನಿರ್ಧಾರದಿಂದ ಎದುರಾಗುವ ಸವಾಲುಗಳು ಕಥೆಗೆ ಭಾವನಾತ್ಮಕ ಆಯಾಮ ನೀಡಿವೆ ಎಂದು ಅವರು ವಿವರಿಸಿದರು.

Leave a Reply

Your email address will not be published. Required fields are marked *