ಎಐ ಡೀಪ್‌ಫೇಕ್ ದುರ್ಬಳಕೆ: ಕಲಾವಿದರ ಘನತೆ ರಕ್ಷಿಸಲು ಅಮಿತ್ ಶಾಗೆ ಚಿರಂಜೀವಿ ಮೊರೆ

0
Chiranjeevi-Ramcharan-meet-amit-shah

ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ಮತ್ತು ಡೀಪ್‌ಫೇಕ್ ತಂತ್ರಜ್ಞಾನಗಳ ದುರ್ಬಳಕೆಯಿಂದ ಕಲಾವಿದರ ಹಕ್ಕು, ಘನತೆ ಹಾಗೂ ಸೃಜನಶೀಲ ಕೃತಿಗಳಿಗೆ ಅಪಾಯ ಎದುರಾಗುತ್ತಿದೆ ಎಂದು ಹಿರಿಯ ನಟ ಚಿರಂಜೀವಿ ಕಳವಳ ವ್ಯಕ್ತಪಡಿಸಿದ್ದಾರೆ.

ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಅವರು, ಎಐ ತಂತ್ರಜ್ಞಾನದ ದುರ್ಬಳಕೆಯನ್ನು ತಡೆಯಲು ಕಠಿಣ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುವಂತೆ ಮನವಿ ಮಾಡಿದರು.

ಭೇಟಿಯ ಬಳಿಕ ಮಾತನಾಡಿದ ಚಿರಂಜೀವಿ, ತಮ್ಮ ಕಳವಳಗಳನ್ನು ಅಮಿತ್ ಶಾ ಅವರ ಗಮನಕ್ಕೆ ತಂದಿದ್ದಾಗಿ ತಿಳಿಸಿದರು. ಈ ವಿಷಯವನ್ನು ತುರ್ತಾಗಿ ಪರಿಶೀಲಿಸಿ, ಬಲವಾದ ಸುರಕ್ಷತಾ ಕ್ರಮಗಳು ಹಾಗೂ ಕಠಿಣ ದಂಡನೆ ಜಾರಿಗೆ ತರಲು ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ ಎಂದರು.

ಈ ಸಂಬಂಧ ಲಿಖಿತ ಮನವಿ ಸಲ್ಲಿಸುವಂತೆ ಅಮಿತ್ ಶಾ ಸಲಹೆ ನೀಡಿದ್ದು, ವಿಷಯದ ಸಮನ್ವಯದ ಜವಾಬ್ದಾರಿಯನ್ನು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರಿಗೆ ವಹಿಸಿದ್ದಾರೆ ಎಂದು ಚಿರಂಜೀವಿ ತಿಳಿಸಿದರು.

ಚಿತ್ರರಂಗದ ಹಿತದೃಷ್ಟಿಯಿಂದ ಇದೊಂದು ಮಹತ್ವದ ಹೆಜ್ಜೆಯಾಗಿದ್ದು, ಭರವಸೆ ನೀಡಿದ ಗೃಹ ಸಚಿವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು. ಎಐ ಸೃಷ್ಟಿತ ನಕಲಿ ಚಿತ್ರ, ವಿಡಿಯೊಗಳ ಮೂಲಕ ಕಲಾವಿದರ ವ್ಯಕ್ತಿತ್ವ ಮತ್ತು ಖ್ಯಾತಿಗೆ ಧಕ್ಕೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯ ಮಹತ್ವ ಪಡೆದುಕೊಂಡಿದೆ.

Leave a Reply

Your email address will not be published. Required fields are marked *