ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ₹38 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ರಾಮಲಿಂಗಾ ರೆಡ್ಡಿ ಚಾಲನೆ

0
Tourist-Friendly-Development-Works-Bannerghatta-Biological-Park-Ramalinga-Reddy1

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ₹38 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ನೂತನ ಸೌಲಭ್ಯಗಳನ್ನು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಾಮಲಿಂಗಾ ರೆಡ್ಡಿ ಸೋಮವಾರ ಉದ್ಘಾಟಿಸಿದರು.

ವನ್ಯಜೀವಿ ಸಂರಕ್ಷಣೆ, ಪ್ರಾಣಿಗಳ ಕಲ್ಯಾಣ ಮತ್ತು ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನೂತನ ಎಲೆಕ್ಟ್ರಿಕ್ ವಾಹನಗಳಿಗೆ ಚಾಲನೆ ನೀಡಿದರು. ನೂತನ ಆಡಳಿತ ಕಚೇರಿ ‘ಅಡವಿ’, ಲೈವ್ ಫೀಡ್ ಘಟಕ, ಕೇಂದ್ರೀಯ ನರ್ಸರಿ, ಕ್ಯಾರಂಟೈನ್ ಬ್ಲಾಕ್, ನವೀಕೃತ ಮುಖ್ಯ ಪ್ರವೇಶ ದ್ವಾರ ಹಾಗೂ ಝೂ ಶಾಪ್ ಮತ್ತು ಸುವರ್ಣಮುಖಿ ಕೆಫೆಯನ್ನು ಉದ್ಘಾಟಿಸಿದರು.

ಅರಣ್ಯ ಸಿಬ್ಬಂದಿಯ ವಸತಿಗೃಹಗಳು ಹಾಗೂ ತೋಳ, ಚೀತಾ, ಎಮು, ರಿಯಾ ಮತ್ತು ಫೆಸೆಂಟ್ ಪಕ್ಷಿಗಳ ನೂತನ ಆವರಣಗಳಿಗೂ ಚಾಲನೆ ನೀಡಿದರು.

ಹಿಪ್ಪೋಪೊಟಮಸ್ ಚಿಕಿತ್ಸೆಯ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಮೃತಪಟ್ಟ ಪಶುವೈದ್ಯಾಧಿಕಾರಿ ಡಾ. ಸಮೀಕ್ಷ ಅವರ ಸ್ಮರಣಾರ್ಥ ಹಿಪ್ಪೋಪೊಟಮಸ್ ಬ್ಲಾಕ್ ಮತ್ತು ಮರಿಹಿಪ್ಪೋಪೊಟಮಸ್‌ಗೆ ‘ಸಮೀಕ್ಷ’ ಎಂದು ನಾಮಕರಣ ಮಾಡುವಂತೆ ಸಚಿವರು ಸೂಚಿಸಿದರು.

ಇದೇ ವೇಳೆ ಸಫಾರಿ ಪ್ರದೇಶದಲ್ಲಿ ಆನೆಗಳ ಆರೋಗ್ಯ, ಆರೈಕೆ ಮತ್ತು ಕಲ್ಯಾಣಕ್ಕಾಗಿ ನಿರ್ಮಿಸಿರುವ ‘ಸುವರ್ಣ ಆನೆ ಆರೈಕೆ ಕೇಂದ್ರ’ದ ವೀಕ್ಷಣಾ ಗೋಪುರವನ್ನು ಉದ್ಘಾಟಿಸಿದರು. ಸಫಾರಿ ಮೂಲಕ ಉದ್ಯಾನವನದ ವನ್ಯಜೀವಿ ಸಂರಕ್ಷಣೆ ಮತ್ತು ನಿರ್ವಹಣಾ ಚಟುವಟಿಕೆಗಳನ್ನು ವೀಕ್ಷಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಬಿ. ಶಿವಣ್ಣ, ಎಂ. ಕೃಷ್ಣಪ್ಪ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥ ರವಿ ಬಿ.ಪಿ. ಸೇರಿದಂತೆ ಹಲವು ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *