ಶ್ವೇತಭವನದಲ್ಲಿ ಟ್ರಂಪ್ ಜೊತೆ ದೀಪಾವಳಿ ಆಚರಿಸಿದ ಭಾರತದ ರಾಯಭಾರಿ

ವಾಷಿಂಗ್ಟನ್: ಅಮೆರಿಕಕ್ಕೆ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಅವರು ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೀಪಾವಳಿ ಹಬ್ಬ ಆಚರಿಸಿದರು. ಈ ಮೂಲಕ ಭಾರತ ಮತ್ತು ಭಾರತೀಯ ವಲಸಿಗರಿಗೆ ಹಬ್ಬದ ಮಹತ್ವವನ್ನು ಎತ್ತಿ ತೋರಿಸಿದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕ್ವಾತ್ರಾ, ಟ್ರಂಪ್ ಅವರೊಂದಿಗೆ ದೀಪಾವಳಿ ಆಚರಿಸುವ ಅವಕಾಶ ದೊರೆತಿರುವುದು ಗೌರವದ ಸಂಗತಿ ಎಂದು ಹೇಳಿದ್ದಾರೆ. ಹಬ್ಬದ ಆಧ್ಯಾತ್ಮಿಕ ಮಹತ್ವವನ್ನು ಗುರುತಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಭಾರತದ ಜನರ ಪರವಾಗಿ ಟ್ರಂಪ್ ಅವರಿಗೆ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಹಾರೈಸಿರುವುದಾಗಿ ಕ್ವಾತ್ರಾ ತಿಳಿಸಿದ್ದಾರೆ.
