ನಕಲಿ ಔಷಧಿ ಜಾಲ ಪತ್ತೆ ಬೆನ್ನಲ್ಲೇ ಅಲರ್ಟ್; ರಾಜ್ಯಾದ್ಯಂತ ಔಷಧಿಗಳ ಪರಿಶೀಲನೆಗೆ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ₹6 ಕೋಟಿಗೂ ಹೆಚ್ಚು ಮೌಲ್ಯದ ನಕಲಿ ಔಷಧಿ ಜಾಲ ಪತ್ತೆಯಾದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದ್ದು, ಎಲ್ಲ ರೀತಿಯ ಔಷಧಿಗಳ ಗುಣಮಟ್ಟ ಮತ್ತು ಮೂಲದ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸುವಂತೆ ಸೂಚಿಸಿದೆ.
ರಾಮನಗರದ ಬಳಿ ಪತ್ತೆಯಾದ ನಕಲಿ ಔಷಧಿ ಜಾಲದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ವಿಭಾಗ ಸುತ್ತೋಲೆ ಹೊರಡಿಸಿದ್ದು, ನಕಲಿ ಔಷಧಿಗಳು ಪತ್ತೆಯಾದರೆ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ನಕಲಿ ಔಷಧಿ ಜಾಲವು ಸುಮಾರು ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದ್ದು, ಔಷಧಿಗಳನ್ನು ಎಲ್ಲೆಲ್ಲಿ ವಿತರಿಸಲಾಗಿದೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಿಗಳನ್ನೂ ನಕಲಿ ಮಾಡಲಾಗುತ್ತಿತ್ತು ಎಂಬ ಮಾಹಿತಿ ಆತಂಕ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಮೆಡಿಕಲ್ ಸ್ಟೋರ್ಗಳು ಹಾಗೂ ಔಷಧ ವಿತರಣಾ ಜಾಲದ ಮೇಲೆ ಹೆಚ್ಚಿನ ನಿಗಾ ವಹಿಸುವಂತೆ ಔಷಧ ನಿಯಂತ್ರಕರಿಗೆ ಸೂಚಿಸಲಾಗಿದೆ.
ಯಾವುದೇ ಪ್ರದೇಶದಲ್ಲಿ ನಕಲಿ ಔಷಧಿ ಪತ್ತೆಯಾದರೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ನಿರ್ದೇಶಿಸಲಾಗಿದೆ. ನಕಲಿ ಔಷಧಿಗಳ ಉತ್ಪಾದನೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದೆ.
