ಫೆಬ್ರವರಿ 2027ರಲ್ಲಿ ನವದೆಹಲಿಯಲ್ಲಿ 5ನೇ ಕೋಸ್ಟ್ ಗಾರ್ಡ್ ಜಾಗತಿಕ ಶೃಂಗಸಭೆ

ನವದೆಹಲಿ: ಭಾರತವು 2027ರ ಫೆಬ್ರವರಿಯಲ್ಲಿ ನವದೆಹಲಿಯಲ್ಲಿ 5ನೇ ಕೋಸ್ಟ್ ಗಾರ್ಡ್ ಜಾಗತಿಕ ಶೃಂಗಸಭೆ (CGGS) ಆಯೋಜಿಸಲಿದೆ. ಭಾರತೀಯ ಕೋಸ್ಟ್ ಗಾರ್ಡ್‌ನ ಸ್ವರ್ಣಿಮ ಜಯಂತಿ ಆಚರಣೆಯೊಂದಿಗೆ ಶೃಂಗಸಭೆ ನಡೆಯಲಿದೆ.
ಶೃಂಗಸಭೆಯ ಸಿದ್ಧತೆಗಳ ಭಾಗವಾಗಿ ಭಾರತೀಯ ಕೋಸ್ಟ್ ಗಾರ್ಡ್ ಬುಧವಾರ ಹೈಬ್ರಿಡ್ ಮಾದರಿಯಲ್ಲಿ ಕಾರ್ಯಮಟ್ಟದ ಸಭೆ ನಡೆಸಿತು. ಸಭೆಯಲ್ಲಿ CGGS ಮಾರ್ಗಸೂಚಿಗಳ ಪರಿಷ್ಕರಣೆ, ಮಾಹಿತಿ ಹಂಚಿಕೆ ವ್ಯವಸ್ಥೆ ಬಲಪಡಿಸುವುದು ಹಾಗೂ ಶೃಂಗಸಭೆಯ ವೆಬ್‌ಸೈಟ್ ಅಭಿವೃದ್ಧಿ ಸೇರಿದಂತೆ ಪ್ರಮುಖ ಸಾಂಸ್ಥಿಕ ವಿಷಯಗಳ ಕುರಿತು ಚರ್ಚಿಸಲಾಯಿತು.
ಜಾಗತಿಕ ಕಡಲ ಸಂಸ್ಥೆಗಳ ನಡುವೆ ವೃತ್ತಿಪರ ಪರಿಣತಿ, ಕಾರ್ಯಾಚರಣೆಯ ಅನುಭವ ಮತ್ತು ಉತ್ತಮ ಪದ್ಧತಿಗಳ ವಿನಿಮಯ ಹೆಚ್ಚಿಸುವ ಮೂಲಕ ಸಾಮೂಹಿಕ ಸಾಮರ್ಥ್ಯ ಬಲಪಡಿಸುವ ಕುರಿತು ಪ್ರತಿನಿಧಿಗಳು ಚರ್ಚಿಸಿದರು.

ನಿರಂತರ ಸಹಕಾರ ಮತ್ತು ಕಡಲ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭವಿಷ್ಯದ ಸಹಯೋಗ ಚಟುವಟಿಕೆಗಳ ವೇಳಾಪಟ್ಟಿಯನ್ನೂ ಸಭೆ ಪರಿಶೀಲಿಸಿತು.
5ನೇ CGGS ಜಾಗತಿಕ ಕಡಲ ಕ್ಷೇತ್ರದ ಸುರಕ್ಷತೆ ಮತ್ತು ಭದ್ರತೆ ಕುರಿತ ಸಮನ್ವಯವನ್ನು ಹೆಚ್ಚಿಸಲು ಭಾಗವಹಿಸುವ ದೇಶಗಳ ಕಡಲ ಸಂಸ್ಥೆಗಳಿಗೆ ಪ್ರಮುಖ ವೇದಿಕೆಯಾಗಲಿದೆ.
ಈ ಶೃಂಗಸಭೆಯು ಭಾರತದ ಮಹಾಸಾಗರ ದೃಷ್ಟಿಕೋನ ಹಾಗೂ ಸಹಯೋಗಾತ್ಮಕ ಮತ್ತು ಸಮಗ್ರ ಕಡಲ ವ್ಯವಸ್ಥೆ ನಿರ್ಮಿಸುವ ಬದ್ಧತೆಯನ್ನು ಪ್ರತಿಬಿಂಬಿಸಲಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್ ತಿಳಿಸಿದೆ.
