ತುಮಕೂರಿನಲ್ಲಿ ಬೆಂಗಳೂರಿನ 2ನೇ ವಿಮಾನ ನಿಲ್ದಾಣ ಅಸಾಧ್ಯ; ಎಂ.ಬಿ. ಪಾಟೀಲ್

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಥವಾ ತುಮಕೂರು ಜಿಲ್ಲೆಯಲ್ಲಿ ಪ್ರತ್ಯೇಕ ವಿಮಾನ ನಿಲ್ದಾಣ ನಿರ್ಮಿಸುವ ಯಾವುದೇ ಪ್ರಸ್ತಾವನೆ ಸದ್ಯ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲ ಎಂದು ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯಲ್ಲಿ ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರದ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ನೀತಿಯ ಪ್ರಕಾರ, ಈಗಿರುವ ಸಿವಿಲ್ ವಿಮಾನ ನಿಲ್ದಾಣದಿಂದ 150 ಕಿ.ಮೀ. ವಾಯು ದೂರದೊಳಗೆ ಸಾಮಾನ್ಯವಾಗಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು ಅನುಮತಿ ನೀಡುವುದಿಲ್ಲ ಎಂದು ತಿಳಿಸಿದರು.
ಈ ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾವನೆ ಬಂದರೆ, ಹಾಲಿ ವಿಮಾನ ನಿಲ್ದಾಣದ ಮೇಲೆ ಉಂಟಾಗುವ ಪರಿಣಾಮವನ್ನು ಪರಿಶೀಲಿಸಿ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.

ಮುಂಬರುವ ಬಜೆಟ್ನಲ್ಲಿ ತುಮಕೂರು ವಿಮಾನ ನಿಲ್ದಾಣಕ್ಕೆ ಅನುದಾನ ಮೀಸಲಿಡುವ ಕುರಿತು ಕೇಳಿದ ಪ್ರಶ್ನೆಗೆ, ಅಂತಹ ಯಾವುದೇ ಯೋಜನೆಯೇ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲದಿರುವುದರಿಂದ ಅನುದಾನ ಹಂಚಿಕೆಯ ಪ್ರಶ್ನೆಯೂ ಉದ್ಭವಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ನಾಯಕರು ತುಮಕೂರಿನಲ್ಲಿ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವಂತೆ ಆಗ್ರಹಿಸಿದ್ದರು. ಆದರೂ ಸದ್ಯಕ್ಕೆ ಸರ್ಕಾರ ಯಾವುದೇ ಯೋಜನೆ ರೂಪಿಸಿಲ್ಲ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
