ರಾಜ್ಯಕ್ಕೆ ಹೆಚ್ಚುವರಿ ಅನಿಲ ಪೂರೈಸಲು ಕೇಂದ್ರಕ್ಕೆ ಸಿದ್ದರಾಮಯ್ಯ ಆಗ್ರಹ

0
LPG Gas

ನವದೆಹಲಿ/ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಉಂಟಾಗಿರುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆ ತಲೆದೋರಿದ್ದು, ಪರಿಸ್ಥಿತಿ ಗಂಭೀರ ಹಂತ ತಲುಪಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ರಾಜ್ಯಾದ್ಯಂತ ವಾಣಿಜ್ಯ ಅನಿಲ ಪೂರೈಕೆಯಲ್ಲಿನ ವ್ಯತ್ಯಯದಿಂದ ಹೋಟೆಲ್‌ಗಳು, ಸಣ್ಣ ಉದ್ಯಮಗಳು ಸೇರಿದಂತೆ ಅನೇಕ ವಲಯಗಳ ಬದುಕು ತತ್ತರಿಸಿದೆ ಎಂದು ಸಿಎಂ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕವೂ ಮಾಹಿತಿ ಹಂಚಿಕೊಂಡು, ತಕ್ಷಣದ ಕ್ರಮದ ಅಗತ್ಯತೆಯನ್ನು ಅವರು ಒತ್ತಿಹೇಳಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ದಿನಕ್ಕೆ ಸುಮಾರು 50 ಸಾವಿರ ಸಿಲಿಂಡರ್‌ಗಳ ಬೇಡಿಕೆ ಇದ್ದರೂ, ಕೇವಲ 1,000 ಸಿಲಿಂಡರ್‌ಗಳಷ್ಟೇ ಪೂರೈಕೆ ಆಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಇದರ ಪರಿಣಾಮವಾಗಿ ಅನೇಕ ಹೋಟೆಲ್‌ಗಳು ಮುಚ್ಚುವ ಹಂತ ತಲುಪಿರುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.

“ಎಲ್‌ಪಿಜಿ ಬಿಕ್ಕಟ್ಟು ಕರ್ನಾಟಕದಾದ್ಯಂತ ಪೂರೈಕೆ ಹಾಗೂ ಜೀವನೋಪಾಯದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಕೊರತೆಯನ್ನು ತಕ್ಷಣ ನೀಗಿಸಬೇಕು” ಎಂದು ಅವರು ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರವು ಈಗಾಗಲೇ ಅಗತ್ಯ ವಲಯಗಳಿಗೆ ಅನಿಲ ಪೂರೈಕೆಯನ್ನು ನಿಯಂತ್ರಿಸಿ ಆದ್ಯತೆ ನೀಡಲು ಕ್ರಮ ಕೈಗೊಂಡಿದ್ದರೂ, ಪೂರೈಕೆ-ಬೇಡಿಕೆಯ ಅಂತರ ಕಡಿಮೆಯಾಗಿಲ್ಲ. ಹೀಗಾಗಿ ವಾಣಿಜ್ಯ ಹಾಗೂ ಆಟೋ ಎಲ್‌ಪಿಜಿಯ ಸಮರ್ಪಕ ಲಭ್ಯತೆಗಾಗಿ ರಾಜ್ಯಕ್ಕೆ ಹೆಚ್ಚುವರಿ ಹಂಚಿಕೆ ನೀಡುವಂತೆ ಕೇಂದ್ರ ಸರ್ಕಾರವನ್ನು ಸಿಎಂ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *