ಬೆಂಗಳೂರಿನ ಬೆಳ್ಳಂದೂರು ಬಳಿ 800 ಕೆಜಿಗೂ ಹೆಚ್ಚು ಸ್ಫೋಟಕ ವಶ

0
Police-Vehicle-Hoysala-750x422-1

ಬೆಂಗಳೂರು: ಬೆಳ್ಳಂದೂರು ಸಮೀಪದ ಭೋಗನಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಗೆ ಅಕ್ರಮವಾಗಿ ಜಿಲೆಟಿನ್ ಬಳಸಿ ಕಲ್ಲುಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಬೆಳ್ಳಂದೂರು ಠಾಣೆ ಪೊಲೀಸರು 800 ಕೆಜಿಗೂ ಹೆಚ್ಚು ಜಿಲೆಟಿನ್ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಭೋಗನಹಳ್ಳಿಯಲ್ಲಿ ಖಾಸಗಿ ಕಂಪನಿಯೊಂದರಿಂದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ವೇಳೆ ಬೃಹತ್ ಕಲ್ಲುಬಂಡೆಗಳು ಪತ್ತೆಯಾಗಿವೆ. ಅವುಗಳನ್ನು ತೆರವುಗೊಳಿಸಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಜಿಲೆಟಿನ್ ಬಳಸಿ ಸ್ಫೋಟಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಾಮಗಾರಿ ನಡೆಯುತ್ತಿರುವ ಪ್ರದೇಶದ ಸಮೀಪವೇ ಶಾಲೆಯಿದ್ದು, ತಡ ರಾತ್ರಿಯೂ ಬ್ಲಾಸ್ಟಿಂಗ್ ನಡೆಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಶಾಲೆಯ ಸಮೀಪ ಸ್ಫೋಟಕ ವಸ್ತುಗಳನ್ನು ಬಳಸುತ್ತಿರುವುದರಿಂದ ಮಕ್ಕಳ ಸುರಕ್ಷತೆ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಬೆಳ್ಳಂದೂರು ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿರ್ಮಾಣ ಸ್ಥಳದಲ್ಲಿ ಸ್ಫೋಟಕ ವಸ್ತುಗಳನ್ನು ಹೇಗೆ ಸಂಗ್ರಹಿಸಲಾಗಿತ್ತು, ಅವುಗಳನ್ನು ಇಟ್ಟುಕೊಳ್ಳಲು ಹಾಗೂ ಬಳಸಲು ಕಾನೂನುಬದ್ಧ ಅನುಮತಿ ಇತ್ತೇ, ಬ್ಲಾಸ್ಟಿಂಗ್ ನಡೆಸಲಾಗುತ್ತಿತ್ತೇ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ವಶಪಡಿಸಿಕೊಂಡಿರುವ ಜಿಲೆಟಿನ್ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *