ಮಾ.11ರಿಂದ ಸರ್ಕಾರಿ ವೈದ್ಯರ ಮುಷ್ಕರಕ್ಕೆ ಕರೆ; ಓಪಿಡಿ ಸೇವೆ ಸ್ಥಗಿತ ಸಾಧ್ಯತೆ

0
hospital corona care

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮಾರ್ಚ್ 11ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತೀರ್ಮಾನಿಸಿದ್ದಾರೆ. ಇದರಿಂದ ರಾಜ್ಯದ ಹಲವಾರು ಸರ್ಕಾರಿ ಆಸ್ಪತ್ರೆಗಳಲ್ಲಿ ಓಪಿಡಿ (OPD) ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಸರ್ಕಾರಿ ವೈದ್ಯಾಧಿಕಾರಿಗಳ ಸಂಘ (Government Medical Officers Association) ಹಲವು ವರ್ಷಗಳಿಂದ ಬಾಕಿಯಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ ಗಮನ ಸೆಳೆಯಲು ಈ ಮುಷ್ಕರಕ್ಕೆ ಕರೆ ನೀಡಿದೆ. ಕಳೆದ ನಾಲ್ಕು ವರ್ಷಗಳಿಂದ ನಡೆಯದಿರುವ ವೃಂದ ಮತ್ತು ನೇಮಕಾತಿ ಪ್ರಕ್ರಿಯೆ, 13 ವರ್ಷಗಳಿಂದ ಪರಿಷ್ಕರಣೆಗೊಳ್ಳದ ವೈದ್ಯರ ಜೇಷ್ಠಾತಾ ಪಟ್ಟಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಸೇರಿದಂತೆ ಒಟ್ಟು 15 ಪ್ರಮುಖ ಬೇಡಿಕೆಗಳನ್ನು ಸಂಘ ಮುಂದಿಟ್ಟಿದೆ.

ಈ ಹಿನ್ನೆಲೆಯಲ್ಲಿ ವೈದ್ಯರು ಹೋರಾಟಕ್ಕೆ ಮುಂದಾಗಿದ್ದು, ಮುಷ್ಕರದಿಂದ ಸರ್ಕಾರಿ ಆಸ್ಪತ್ರೆಗಳ ಮೇಲೆ ಅವಲಂಬಿತರಾಗಿರುವ ರೋಗಿಗಳಿಗೆ ದೊಡ್ಡ ತೊಂದರೆ ಉಂಟಾಗುವ ಸಾಧ್ಯತೆ ಇದೆ. ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಜನರು ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸುತ್ತಿರುವುದರಿಂದ ಪರಿಸ್ಥಿತಿ ಗಂಭೀರವಾಗುವ ಆತಂಕ ವ್ಯಕ್ತವಾಗಿದೆ.

ವೈದ್ಯರ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಹಲವಾರು ಬಾರಿ ಸಂಧಾನ ಸಭೆಗಳು ನಡೆದಿದ್ದರೂ ಫಲಕಾರಿಯಾಗಿಲ್ಲ. ಕರ್ನಾಟಕ ಆರೋಗ್ಯ ಇಲಾಖೆ (Karnataka Health Department) ಈಗಾಗಲೇ ಏಳು ಸಭೆಗಳನ್ನು ನಡೆಸಿದೆ. ಅಂತಿಮವಾಗಿ ಮಾರ್ಚ್ 2ರಂದು ಆರೋಗ್ಯ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯೂ ಫಲಪ್ರದವಾಗದ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಮುಂದಾಗಬೇಕಾಯಿತು ಎಂದು ಸಂಘದ ನಾಯಕರು ತಿಳಿಸಿದ್ದಾರೆ.

ಮಾರ್ಚ್ 11ರಿಂದ ವೈದ್ಯರು ಹಾಗೂ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಓಪಿಡಿ ಸೇವೆಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ. ಅಲ್ಲದೆ ಮಾರ್ಚ್ 16ರಿಂದ ಸಾಮೂಹಿಕವಾಗಿ ಕರ್ತವ್ಯಕ್ಕೆ ಗೈರಾಗುವ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

Leave a Reply

Your email address will not be published. Required fields are marked *