ಸ್ವಾತಂತ್ರ್ಯೋತ್ಸವದಂದು ಡಿಕೆಶಿ ಭರಪೂರ ಘೋಷಣೆ; ಉದ್ಯೋಗ, ಕೃಷಿ, ಕೈಗಾರಿಕೆ, ಬೆಂಗಳೂರು ಅಭಿವೃದ್ಧಿಗೆ ಹೊಸ ಯೋಜನೆಗಳು

ಬೆಂಗಳೂರು: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದ ಜನತೆಗೆ ಹಲವು ಮಹತ್ವದ ಹೊಸ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಘೋಷಿಸಿದರು. ಯುವಕರಿಗೆ ಉದ್ಯೋಗ, ರೈತರಿಗೆ ತಂತ್ರಜ್ಞಾನ ನೆರವು, ಕೈಗಾರಿಕಾ ಹೂಡಿಕೆ, ಬೆಂಗಳೂರು ಅಭಿವೃದ್ಧಿ ಮತ್ತು ಪ್ರಾದೇಶಿಕ ಸಮತೋಲನಕ್ಕೆ ಒತ್ತು ನೀಡುವುದಾಗಿ ಅವರು ತಿಳಿಸಿದರು.
ಕರ್ನಾಟಕ ಹೂಡಿಕೆ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಕಳೆದ ಮೂರು ವರ್ಷಗಳಲ್ಲಿ ₹1.34 ಲಕ್ಷ ಕೋಟಿಗೂ ಅಧಿಕ ಮೊತ್ತದ 945 ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಕಳೆದ ಒಂದು ವರ್ಷದಲ್ಲಿ ₹1.12 ಲಕ್ಷ ಕೋಟಿ ವಿದೇಶಿ ನೇರ ಹೂಡಿಕೆ ಆಕರ್ಷಿಸಲಾಗಿದೆ. ಕೈಗಾರಿಕಾ ನೀತಿ 2025–30 ಜಾರಿಗೊಳಿಸಲಾಗಿದ್ದು, ಹೂಡಿಕೆಯನ್ನು ಉದ್ಯೋಗವಾಗಿ ಹಾಗೂ ಉದ್ಯೋಗವನ್ನು ಪ್ರಾದೇಶಿಕ ಸಮೃದ್ಧಿಯಾಗಿ ಪರಿವರ್ತಿಸುವುದು ಸರ್ಕಾರದ ಗುರಿಯಾಗಿದೆ ಎಂದರು.
ಯುವಕರಿಗಾಗಿ ‘ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ’ ಯೋಜನೆ ಘೋಷಿಸಿದ ಅವರು, 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭವಾಗಿದ್ದು, ಮುಂದಿನ ಆರು ತಿಂಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದರು. ‘ಯುವ ಉದ್ಯೋಗ ಸೇತು’ ಮೂಲಕ ಉದ್ಯೋಗಾಕಾಂಕ್ಷಿಗಳು, ಉದ್ಯೋಗದಾತರು ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರಲಾಗುವುದು. 100 ಸರ್ಕಾರಿ ಐಟಿಐಗಳನ್ನು ಉದ್ಯೋಗ ಆಧಾರಿತ ಕ್ಯಾಂಪಸ್‌ಗಳಾಗಿ ಪರಿವರ್ತಿಸಿ, ಕೈಗಾರಿಕೆಗಳ ಸಹಯೋಗದಲ್ಲಿ 10 ಸಾವಿರ ಯುವಕರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಹಿಂದುಳಿದ 10 ಜಿಲ್ಲೆಗಳಲ್ಲಿ ಹೊಸ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಿಗೆ ‘ಉದ್ಯೋಗ ನಿಧಿ’ ಯೋಜನೆಯಡಿ ಪ್ರತಿ ಹೊಸ ಉದ್ಯೋಗಕ್ಕೆ ತಿಂಗಳಿಗೆ ₹2,500 ಪ್ರೋತ್ಸಾಹಧನ ನೀಡಲಾಗುವುದು. ಎರಡು ವರ್ಷಗಳ ಕಾಲ ಜಾರಿಯಾಗಲಿರುವ ಯೋಜನೆಯಿಂದ ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ.

ರೈತರಿಗಾಗಿ ‘ಮುಖ್ಯಮಂತ್ರಿ ರೈತ ಚೈತನ್ಯ’ ಯೋಜನೆ ಜಾರಿಗೊಳಿಸಲಾಗುವುದು. ಡ್ರೋನ್ ಮತ್ತು ಉಪಗ್ರಹ ಚಿತ್ರಗಳ ಮೂಲಕ ಬೆಳೆ ಸಮೀಕ್ಷೆ ನಡೆಸಿ, ಬೆಳೆ, ಕೀಟ-ರೋಗ ಬಾಧೆ ಹಾಗೂ ಮಾರುಕಟ್ಟೆ ಕುರಿತು ನೈಜ ಸಮಯದ ಮಾಹಿತಿ ಒದಗಿಸಲಾಗುವುದು. ‘ರೈತ ಮಿತ್ರ’ ಯೋಜನೆಯಡಿ ಮೂರು ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಶುಲ್ಕದಲ್ಲಿ ಶೇ.50ರಷ್ಟು ಸಬ್ಸಿಡಿ ನೀಡಲಾಗುವುದು ಎಂದರು.
ದೊಡ್ಡಬಳ್ಳಾಪುರದಲ್ಲಿ ₹20 ಸಾವಿರ ಕೋಟಿ ಹೂಡಿಕೆ ಬದ್ಧತೆಯೊಂದಿಗೆ ಅತ್ಯಾಧುನಿಕ ಉತ್ಪಾದನಾ ಕ್ಲಸ್ಟರ್ ಸ್ಥಾಪಿಸಲಾಗುತ್ತಿದ್ದು, ಇದರಿಂದ ಸುಮಾರು ಒಂದು ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. GIS ಆಧಾರಿತ ಡಿಜಿಟಲ್ ಕೈಗಾರಿಕಾ ಭೂಬ್ಯಾಂಕ್ ಮೂಲಕ ಹೂಡಿಕೆದಾರರಿಗೆ ಭೂಮಿಯ ಕುರಿತು ತ್ವರಿತ ಮಾಹಿತಿ ಒದಗಿಸಲಾಗುವುದು.
‘ಬಿಯಾಂಡ್ ಬೆಂಗಳೂರು’ ಯೋಜನೆಯಡಿ ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರಿನಲ್ಲಿ ಐದು ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಓದಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ಪ್ರವೇಶದಲ್ಲಿ ‘ವಿದ್ಯಾರ್ಥಿ ಸಹಾಯ ಹಸ್ತ’ ಯೋಜನೆಯಡಿ ಶೇ.7.5 ಮೀಸಲಾತಿ ನೀಡಲಾಗುವುದು ಎಂದು ಘೋಷಿಸಿದರು.
ಬೆಂಗಳೂರು ಅಭಿವೃದ್ಧಿಗೂ ಹಲವು ಯೋಜನೆಗಳನ್ನು ಪ್ರಕಟಿಸಿದ ಶಿವಕುಮಾರ್, ನಗರದಲ್ಲಿ ₹1.50 ಲಕ್ಷ ಕೋಟಿ ಮೊತ್ತದ ವಿವಿಧ ಮೂಲಸೌಕರ್ಯ ಕಾಮಗಾರಿಗಳು ನಡೆಯುತ್ತಿವೆ ಎಂದರು. ಮೆಟ್ರೋ ಮೂರನೇ ಹಂತ ಪೂರ್ಣಗೊಂಡ ಬಳಿಕ ಜಾಲ 220 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಪ್ರಮುಖ ರಸ್ತೆ ಅಭಿವೃದ್ಧಿಗೆ ₹5 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ.
ಎರಡು ದಶಕಗಳಿಂದ ಬಾಕಿ ಉಳಿದಿದ್ದ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ ‘ಬೆಂಗಳೂರು ಬಿಸಿನೆಸ್ ಕಾರಿಡಾರ್’ ಎಂಬ ಹೊಸ ರೂಪ ನೀಡಲಾಗಿದ್ದು, ₹26 ಸಾವಿರ ಕೋಟಿ ವೆಚ್ಚದಲ್ಲಿ 117 ಕಿ.ಮೀ. ರಿಂಗ್ ರಸ್ತೆ ನಿರ್ಮಿಸಲಾಗುವುದು. BBC-1 ಅಡಿಯಲ್ಲಿ 68 ಕಿ.ಮೀ. 12 ಪಥದ ರಸ್ತೆ ಹಾಗೂ ಎಲೆಕ್ಟ್ರಾನಿಕ್ ಸಿಟಿಯಿಂದ ಮೈಸೂರು ರಸ್ತೆ ಮೂಲಕ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ 44 ಕಿ.ಮೀ. BBC-2 ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಬೆಂಗಳೂರು ಪೊಲೀಸ್ ಕಮಿಷನರೇಟ್ ಅನ್ನು ಐದು ಕಮಿಷನರೇಟ್‌ಗಳಾಗಿ ವಿಭಜಿಸಿ, ಅಗತ್ಯವಿರುವ ಕಡೆ ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುವುದು. ಸಂಚಾರ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಿ, ನಗರವನ್ನು ಭಯಮುಕ್ತವಾಗಿಸಲು ಪ್ರತ್ಯೇಕ ರೌಡಿ ಸ್ಕ್ವಾಡ್ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.
ನಗರದ ಹಸಿರು ಪ್ರದೇಶ ಹೆಚ್ಚಿಸಲು ಐದು ಹೊಸ ಟ್ರೀ ಪಾರ್ಕ್‌ಗಳನ್ನು ನಿರ್ಮಿಸಲಾಗುವುದು. ಅಂತರ್ಜಲ ಹಾಗೂ ಕುಡಿಯುವ ನೀರಿನ ಭದ್ರತೆಗಾಗಿ ಏಳು ಪ್ರಮುಖ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುವುದು. ವಾಹನ ಮಾಲೀಕರಿಗೆ ಕೈಗೆಟುಕುವ ವಿಮೆ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮೋಟಾರು ವಾಹನ ವಿಮಾ ಸಂಸ್ಥೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಆಸ್ತಿ ಮಾಲೀಕತ್ವದ ಗೊಂದಲ ನಿವಾರಿಸಲು ‘ಭೂ-ಗ್ಯಾರಂಟಿ’ ಹಾಗೂ ಇ-ಖಾತಾ ವ್ಯವಸ್ಥೆ ಜಾರಿಗೊಳಿಸಿರುವುದನ್ನು ಪ್ರಸ್ತಾಪಿಸಿದ ಶಿವಕುಮಾರ್, ಬೆಂಗಳೂರು ಜನತೆಗೆ ಉತ್ತಮ ಆಡಳಿತ, ಸುರಕ್ಷತೆ ಮತ್ತು ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಮಹತ್ವದ ಹೆಜ್ಜೆಗಳನ್ನು ಇಡುತ್ತಿದೆ ಎಂದರು.
“ಈಗಾಗಲೇ ಮಾಡಿರುವ ಕೆಲಸಗಳಿಂದ ತೃಪ್ತಿಪಡುವುದಿಲ್ಲ. ವರ್ತಮಾನವನ್ನು ಭವಿಷ್ಯಕ್ಕೆ ಬೇಕಾದಂತೆ ರೂಪಿಸುವುದು ನನ್ನ ಗುರಿ. ಯುವಕರು ಉದ್ಯೋಗಿಗಳಾಗಬೇಕು, ರೈತರು ಸಮೃದ್ಧರಾಗಬೇಕು, ಮಹಿಳೆಯರು ಸ್ವಾವಲಂಬಿಗಳಾಗಬೇಕು ಮತ್ತು ರಾಜ್ಯದ ಪ್ರತಿಯೊಂದು ಭಾಗಕ್ಕೂ ಅಭಿವೃದ್ಧಿಯ ಅವಕಾಶ ತಲುಪಬೇಕು” ಎಂದು ಮುಖ್ಯಮಂತ್ರಿ ಹೇಳಿದರು.
