ಬಳ್ಳಾರಿ–ಗುಂಟಕಲ್ ರೈಲು ಮಾರ್ಗ ವಿಸ್ತರಣೆಗೆ ₹1,264 ಕೋಟಿ ಅನುಮೋದನೆ; 2028-29ರೊಳಗೆ ಕಾಮಗಾರಿ ಪೂರ್ಣ

0
Train-Railway-Track-750x428-1-300x171-2

ನವದೆಹಲಿ: ಕರ್ನಾಟಕ ಮತ್ತು ಆಂಧ್ರಪ್ರದೇಶವನ್ನು ಸಂಪರ್ಕಿಸುವ ಬಳ್ಳಾರಿ–ಗುಂಟಕಲ್ ರೈಲು ವಿಭಾಗದಲ್ಲಿ ಮೂರನೇ ಹಾಗೂ ನಾಲ್ಕನೇ ರೈಲು ಮಾರ್ಗ ನಿರ್ಮಾಣಕ್ಕೆ ₹1,264 ಕೋಟಿ ವೆಚ್ಚದ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ (CCEA) ಅನುಮೋದನೆ ನೀಡಿದೆ.

2028-29ರೊಳಗೆ ಪೂರ್ಣಗೊಳ್ಳಲಿರುವ ಈ ಯೋಜನೆಯಿಂದ ಭಾರತೀಯ ರೈಲ್ವೆ ಜಾಲಕ್ಕೆ ಸುಮಾರು 46 ಕಿ.ಮೀ. ಹೊಸ ಮಾರ್ಗ ಸೇರ್ಪಡೆಯಾಗಲಿದ್ದು, ಮಾರ್ಗ ಸಾಮರ್ಥ್ಯ ಹೆಚ್ಚಳ, ದಟ್ಟಣೆ ನಿವಾರಣೆ ಹಾಗೂ ಸರಕು ಸಾಗಣೆ ದಕ್ಷತೆ ಸುಧಾರಿಸುವ ಗುರಿ ಹೊಂದಲಾಗಿದೆ.

ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ರೂಪಿಸಲಾದ ಈ ಯೋಜನೆಯು ಕರ್ನಾಟಕ ಮತ್ತು ಆಂಧ್ರಪ್ರದೇಶದ ಮೂರು ಜಿಲ್ಲೆಗಳ ಸುಮಾರು 99 ಗ್ರಾಮಗಳಿಗೆ ಉತ್ತಮ ರೈಲು ಸಂಪರ್ಕ ಕಲ್ಪಿಸಲಿದೆ. ಇದರಿಂದ ಸುಮಾರು ಏಳು ಲಕ್ಷ ಜನರಿಗೆ ಪ್ರಯೋಜನವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಯೋಜನೆಯಿಂದ ಬಳ್ಳಾರಿ ಕೋಟೆ ಹಾಗೂ ಶ್ರೀ ಕುಮಾರಸ್ವಾಮಿ ದೇವಸ್ಥಾನ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಸುಧಾರಿಸುವುದರ ಜೊತೆಗೆ ಕಬ್ಬಿಣದ ಅದಿರು, ಡಾಲಮೈಟ್, ಸುಣ್ಣದ ಕಲ್ಲು, ಉಕ್ಕು, ಕಲ್ಲಿದ್ದಲು, ರಸಗೊಬ್ಬರ ಹಾಗೂ ಆಹಾರ ಧಾನ್ಯಗಳಂತಹ ಸರಕುಗಳ ಸಾಗಣೆಗೆ ಹೆಚ್ಚಿನ ಅನುಕೂಲವಾಗಲಿದೆ.

ರೈಲು ಮಾರ್ಗ ವಿಸ್ತರಣೆಯಿಂದ ವರ್ಷಕ್ಕೆ 16.22 ಮಿಲಿಯನ್ ಟನ್ ಹೆಚ್ಚುವರಿ ಸರಕು ಸಾಗಣೆ ಸಾಧ್ಯವಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ. ಜೊತೆಗೆ ವಾರ್ಷಿಕ 1.32 ಕೋಟಿ ಲೀಟರ್ ತೈಲ ಉಳಿತಾಯ ಹಾಗೂ 6.67 ಕೋಟಿ ಕೆಜಿ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ಕಡಿತ ಸಾಧ್ಯವಾಗಲಿದ್ದು, ಇದು ಸುಮಾರು 0.27 ಕೋಟಿ ಮರಗಳನ್ನು ನೆಟ್ಟ ಪರಿಣಾಮಕ್ಕೆ ಸಮನಾಗಿರಲಿದೆ ಎಂದು ತಿಳಿಸಲಾಗಿದೆ.

ಈ ಯೋಜನೆಯು ರೈಲು ಸೇವೆಯ ವಿಶ್ವಾಸಾರ್ಹತೆ ಹೆಚ್ಚಿಸುವುದರೊಂದಿಗೆ ಉದ್ಯೋಗ ಹಾಗೂ ಸ್ವಯಂ ಉದ್ಯೋಗ ಅವಕಾಶಗಳನ್ನೂ ಸೃಷ್ಟಿಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Leave a Reply

Your email address will not be published. Required fields are marked *