ದೆಹಲಿಯಲ್ಲಿ ಭೀಕರ ಕಾರು ಅಪಘಾತ; ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ

0
Accident-road-closed-300x186-1-4

ನವದೆಹಲಿ: ದೆಹಲಿಯ ಐಟಿಒ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹಾಗೂ ದೆಹಲಿಯ ಕಿರಾರಿ ಕ್ಷೇತ್ರದ ಶಾಸಕ ಅನಿಲ್ ಝಾ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ಸುಮಾರು 9.30ರ ವೇಳೆಗೆ ಪಿಡಬ್ಲ್ಯುಡಿ ಕಚೇರಿ ಬಳಿ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಲಕ್ಷ್ಮೀನಗರದಿಂದ ಐಟಿಒ ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕ ದಾಟಿ ಎದುರಿನಿಂದ ಬರುತ್ತಿದ್ದ ಇನ್ನೋವಾ ಎಸ್‌ಯುವಿಗೆ ಡಿಕ್ಕಿ ಹೊಡೆದಿದೆ. ಎಸ್‌ಯುವಿಯಲ್ಲಿ ಅಭಯ್ ಪಾಟೀಲ್ ಮತ್ತು ಅನಿಲ್ ಝಾ ಪ್ರಯಾಣಿಸುತ್ತಿದ್ದರು.

ಸ್ವಿಫ್ಟ್ ಕಾರನ್ನು 32 ವರ್ಷದ ಆಶುತೋಷ್ ಪಾಂಡೆ ಚಲಾಯಿಸುತ್ತಿದ್ದು, ಅವರೊಂದಿಗೆ ಪತ್ನಿ ಹಾಗೂ ಇಬ್ಬರು ಅಪ್ರಾಪ್ತ ಮಕ್ಕಳು ಇದ್ದರು. ಅಪಘಾತದಲ್ಲಿ ಎರಡೂ ವಾಹನಗಳಲ್ಲಿದ್ದವರಿಗೆ ಗಾಯಗಳಾಗಿದ್ದು, ಎಲ್ಲರನ್ನೂ ತಕ್ಷಣ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ವಿಧಿವಿಜ್ಞಾನ ತಂಡ ಸಾಕ್ಷ್ಯ ಸಂಗ್ರಹಿಸಿದ್ದು, ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಐಪಿ ಎಸ್ಟೇಟ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *