ಜಿಂಬಾಬ್ವೆಯ ಕರಿಬಾ ಕೆರೆಯಲ್ಲಿ ದೋಣಿ ಮಗುಚಿ 15 ಮಂದಿ ಜಲಸಮಾಧಿ

0
Drown-In-River-death-750x487-1

ಹರಾರೆ: ಜಿಂಬಾಬ್ವೆಯ ಕರಿಬಾ ಕೆರೆಯಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ ಬಿದ್ದ ಪರಿಣಾಮ ಕನಿಷ್ಠ 15 ಮಂದಿ ಮೃತಪಟ್ಟಿದ್ದು, 27 ಮಂದಿ ನಾಪತ್ತೆಯಾಗಿದ್ದಾರೆ. 77 ಮಂದಿಯನ್ನು ರಕ್ಷಿಸಲಾಗಿದ್ದು, ಅವರು ಕೆರೆಯಲ್ಲಿರುವ ಸಣ್ಣ ದ್ವೀಪವೊಂದನ್ನು ತಲುಪಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ಜಿಂಬಾಬ್ವೆ ಮತ್ತು ಜಾಂಬಿಯಾ ನಡುವೆ ಹಂಚಿಕೊಂಡಿರುವ ಕರಿಬಾ ಕೆರೆ ವಿಶ್ವದ ಅತಿದೊಡ್ಡ ಮಾನವ ನಿರ್ಮಿತ ಸರೋವರಗಳಲ್ಲಿ ಒಂದಾಗಿದೆ.

ರಕ್ಷಿಸಲ್ಪಟ್ಟವರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ದೋಣಿಗಳನ್ನು ಕಳುಹಿಸಲಾಗಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ನೀರಿನೊಳಗೆ ಕಾರ್ಯನಿರ್ವಹಿಸುವ ವಿಶೇಷ ತಂಡದ ಜತೆಗೆ ಹೆಲಿಕಾಪ್ಟರ್‌ಗಳು ಮತ್ತು ವೇಗದ ದೋಣಿಗಳನ್ನೂ ಕಾರ್ಯಾಚರಣೆಗೆ ಬಳಸಲಾಗುತ್ತಿದೆ.

ನೋಂದಾಯಿತ ಟಿಕೆಟ್ ದಾಖಲೆಗಳ ಪ್ರಕಾರ ದೋಣಿಯಲ್ಲಿ 114 ವಯಸ್ಕ ಪ್ರಯಾಣಿಕರು ಹಾಗೂ ಐವರು ಸಿಬ್ಬಂದಿ ಇದ್ದರು. ಆದರೆ ಟಿಕೆಟ್ ಪಡೆಯುವ ವಯಸ್ಸಿಗೆ ತಲುಪದ ಮಕ್ಕಳ ಸಂಖ್ಯೆ ತಿಳಿದಿಲ್ಲ. ಹೀಗಾಗಿ ನಾಪತ್ತೆಯಾದವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೋಣಿಯ ಗರಿಷ್ಠ ಸಾಗಣೆ ಸಾಮರ್ಥ್ಯ 90 ಮಂದಿಯಾಗಿದ್ದರೂ, ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಇದ್ದಿರುವುದು ಬೆಳಕಿಗೆ ಬಂದಿದೆ. ಘಟನೆಯನ್ನು ಅಧಿಕೃತವಾಗಿ ವಿಪತ್ತು ಎಂದು ಘೋಷಿಸುವಂತೆ ನಾಗರಿಕ ರಕ್ಷಣಾ ಘಟಕ ಶಿಫಾರಸು ಮಾಡಿದೆ.

Leave a Reply

Your email address will not be published. Required fields are marked *