ಸಕ್ಕರೆ ಬೆಲೆ ಶೇ.20ರಷ್ಟು ಇಳಿಕೆ; ಸಂಗ್ರಹಣೆ ತಡೆಯಲು ಸರ್ಕಾರದಿಂದ ಕಠಿಣ ಕ್ರಮ

0
Sugar-Grocery-health-tips-1

ನವದೆಹಲಿ: ದೇಶದಲ್ಲಿ ಸಕ್ಕರೆಯ ಕೊರತೆಯಿಲ್ಲ ಎಂದು ಗ್ರಾಹಕರಿಗೆ ಭರವಸೆ ನೀಡಿರುವ ಕೇಂದ್ರ ಸರ್ಕಾರ, ಇತ್ತೀಚಿನ ದಿನಗಳಲ್ಲಿ ಸಗಟು ಸಕ್ಕರೆ ಬೆಲೆಗಳು ಸುಮಾರು ಶೇ.20ರಷ್ಟು ಇಳಿಕೆಯಾಗಿದ್ದು, ಚಿಲ್ಲರೆ ಬೆಲೆಗಳೂ ಕುಸಿಯಲು ಆರಂಭಿಸಿವೆ ಎಂದು ಶುಕ್ರವಾರ ತಿಳಿಸಿದೆ.

ಸಕ್ಕರೆ ಕಾರ್ಖಾನೆಗಳಲ್ಲಿನ ದಾಸ್ತಾನುಗಳ ಭೌತಿಕ ಪರಿಶೀಲನೆ ನಡೆಸಲಾಗಿದ್ದು, ದೇಶದಲ್ಲಿ ಸಾಕಷ್ಟು ಪ್ರಮಾಣದ ಸಕ್ಕರೆ ಲಭ್ಯವಿರುವುದು ಕಂಡುಬಂದಿದೆ. ಹಲವು ಕಾರ್ಖಾನೆಗಳಲ್ಲಿ ಮಾಸಿಕ ರಿಟರ್ನ್‌ಗಳಲ್ಲಿ ಘೋಷಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ಸಕ್ಕರೆ ದಾಸ್ತಾನು ಇರುವುದು ಪತ್ತೆಯಾಗಿದೆ ಎಂದು ಸರ್ಕಾರ ತಿಳಿಸಿದೆ.

ಸಾಕಷ್ಟು ದಾಸ್ತಾನು ಇದ್ದರೂ ಕೆಲವು ಕಾರ್ಖಾನೆಗಳು ಮಾರುಕಟ್ಟೆಗೆ ಸಕ್ಕರೆ ಪೂರೈಕೆಯನ್ನು ಸೀಮಿತಗೊಳಿಸಿ ಕಡಿಮೆ ಪ್ರಮಾಣದಲ್ಲಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೃತಕ ಕೊರತೆ ಸೃಷ್ಟಿಸುವುದು, ಸಕ್ಕರೆ ಸಂಗ್ರಹಿಸುವುದು ಹಾಗೂ ಊಹಾತ್ಮಕ ದಾಸ್ತಾನು ತಡೆಯಲು ಸರ್ಕಾರ ಕ್ರಮ ಕೈಗೊಂಡಿದೆ.

ಸಕ್ಕರೆಯ ಮಾರುಕಟ್ಟೆ ಪೂರೈಕೆಯನ್ನು ವೇಗಗೊಳಿಸುವ ಉದ್ದೇಶದಿಂದ ಸೆಪ್ಟೆಂಬರ್‌ನಿಂದ 15 ದಿನಕ್ಕೊಮ್ಮೆ ಹಂಚಿಕೆ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಇದು ಪ್ರಸ್ತುತ ಇರುವ ಮಾಸಿಕ ಕೋಟಾ ವ್ಯವಸ್ಥೆಯನ್ನು ಬದಲಿಸಲಿದೆ.

ಹೊಸ ವ್ಯವಸ್ಥೆಯಡಿ ಕಾರ್ಖಾನೆಗಳು ತಮಗೆ ನಿಗದಿಪಡಿಸಿದ ಕೋಟಾದ ಕನಿಷ್ಠ ಶೇ.40ರಷ್ಟು ಸಕ್ಕರೆಯನ್ನು ಮೊದಲ ವಾರದಲ್ಲೇ ಮಾರಾಟ ಮಾಡಬೇಕು. ಉಳಿದ ಪ್ರಮಾಣವನ್ನು ಮುಂದಿನ ವಾರದಲ್ಲಿ ಮಾರುಕಟ್ಟೆಗೆ ಬಿಡಬೇಕಾಗುತ್ತದೆ. ಮಾರಾಟವಾದ ಸಕ್ಕರೆಯನ್ನು ಏಳು ದಿನಗಳೊಳಗೆ ರವಾನೆ ಮಾಡುವಂತೆಯೂ ಕಾರ್ಖಾನೆಗಳಿಗೆ ಸೂಚಿಸಲಾಗಿದೆ.

ಹೊಸ ಸಕ್ಕರೆ ಋತುವಿನಲ್ಲಿ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆಯಿದ್ದು, ಅಕ್ಟೋಬರ್ 15ರಿಂದ ಕಬ್ಬು ಅರೆಯುವಿಕೆ ಆರಂಭವಾಗಲಿದೆ. ಅಕ್ಟೋಬರ್‌ನಲ್ಲಿ 10 ಲಕ್ಷ ಟನ್‌ಗಿಂತ ಹೆಚ್ಚು ಹಾಗೂ ನವೆಂಬರ್‌ನಲ್ಲಿ ಸುಮಾರು 45 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗುವ ನಿರೀಕ್ಷೆಯಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಹೆಚ್ಚುವರಿಯಾಗಿ ಲಭ್ಯವಾಗುವ ಸಕ್ಕರೆ ಉತ್ಪಾದನೆಯಿಂದ ಮಾರುಕಟ್ಟೆ ಪೂರೈಕೆ ಮತ್ತಷ್ಟು ಸುಧಾರಿಸುವ ನಿರೀಕ್ಷೆಯಿದೆ. ಹಬ್ಬದ ಋತುವಿನ ಸಂದರ್ಭದಲ್ಲಿ ಸಕ್ಕರೆಯ ಲಭ್ಯತೆ ಖಚಿತಪಡಿಸಲು ಈ ಕ್ರಮಗಳು ನೆರವಾಗಲಿವೆ ಎಂದು ಸರ್ಕಾರ ತಿಳಿಸಿದೆ.

Leave a Reply

Your email address will not be published. Required fields are marked *