ಶುದ್ಧೀಕರಣದ ಕುರಿತು ಹೇಳಿಕೆ; ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

0
Rahul-gandhi

ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಉತ್ತರಾಖಂಡದ ಹಲ್ದ್ವಾನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗಳ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಅಮಿತ್ ಕುಮಾರ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ರಾಹುಲ್ ಗಾಂಧಿಯವರ ಹೇಳಿಕೆಗಳು ಪರಿಶಿಷ್ಟ ಜಾತಿ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದ ಸ್ಥಳವನ್ನು ಬಿಜೆಪಿ ಸದಸ್ಯರು ಶುದ್ಧೀಕರಣ ಮಾಡಿದ್ದ ವಿಚಾರವನ್ನು ಖಂಡಿಸಿ ರಾಹುಲ್ ಗಾಂಧಿ ಮಾತನಾಡಿದ್ದರು. ಈ ಹೇಳಿಕೆಗಳೇ ಇದೀಗ ಕಾನೂನು ಕ್ರಮಕ್ಕೆ ಕಾರಣವಾಗಿವೆ ಎಂದು ತಿಳಿದುಬಂದಿದೆ.

ದೂರುದಾರರ ಪ್ರಕಾರ, ಆಗಸ್ಟ್ 8ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್‌ನ ‘ವಿಜಯ್ ಶಂಖನಾದ’ ರ್ಯಾಲಿ ನಡೆದಿತ್ತು. ರ್ಯಾಲಿ ಬಳಿಕ ಮೈದಾನದಲ್ಲಿ ಕಸ ಹಾಗೂ ಇತರ ವಸ್ತುಗಳು ಕಂಡುಬಂದ ಹಿನ್ನೆಲೆಯಲ್ಲಿ ಆಗಸ್ಟ್ 11ರಂದು ಪರಿಶಿಷ್ಟ ಜಾತಿ ಸಮುದಾಯದ ಕೆಲವರೊಂದಿಗೆ ಮೈದಾನವನ್ನು ಸ್ವಚ್ಛಗೊಳಿಸಿ ಹವನ ನಡೆಸಲಾಗಿತ್ತು. ಮೈದಾನವನ್ನು ಸ್ವಚ್ಛಗೊಳಿಸುವುದು ಮತ್ತು ಧಾರ್ಮಿಕ ಶುದ್ಧೀಕರಣ ಮಾಡುವುದು ಇದರ ಉದ್ದೇಶವಾಗಿತ್ತು ಎಂದು ಅವರು ಹೇಳಿದ್ದಾರೆ.

ಆದರೆ, ಆಗಸ್ಟ್ 29ರಂದು ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ ಈ ಶುದ್ಧೀಕರಣವನ್ನು ಅಸ್ಪೃಶ್ಯತೆಗೆ ಸಂಬಂಧಿಸಿದಂತೆ ಬಿಂಬಿಸಿದ್ದಾರೆ ಎಂದು ಅಮಿತ್ ಕುಮಾರ್ ಆರೋಪಿಸಿದ್ದಾರೆ. ಇದರಿಂದ ಶುದ್ಧೀಕರಣದಲ್ಲಿ ಭಾಗವಹಿಸಿದ್ದವರನ್ನು ದಲಿತ ವಿರೋಧಿಗಳು ಹಾಗೂ ಅಸ್ಪೃಶ್ಯತೆ ಆಚರಿಸುವವರಂತೆ ಚಿತ್ರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಎಫ್‌ಐಆರ್ ದಾಖಲಿಸುವ ಸಂದರ್ಭದಲ್ಲಿ ಶ್ರೀರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ್‌ನ ಸದಸ್ಯ ವಿನೋದ್ ಆರ್ಯ ಕೂಡ ಉಪಸ್ಥಿತರಿದ್ದರು. ಪ್ರಕರಣದ ಕುರಿತು ಹಲ್ದ್ವಾನಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *