ಶಾಲೆಗಳಲ್ಲಿ ಅಶ್ಲೀಲ ಹಾಡುಗಳಿಗೆ ನೃತ್ಯ ನಿಷೇಧ: ಶಿಕ್ಷಣ ಇಲಾಖೆ ಸುತ್ತೋಲೆ

0
school students friendship unity

ಬೆಂಗಳೂರು:ಶಾಲೆ ಗಳು ಮತ್ತು ಕಾಲೇಜುಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು, ವಾರ್ಷಿಕೋತ್ಸವಗಳಲ್ಲಿ ವಿದ್ಯಾರ್ಥಿಗಳು ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (School Education and Literacy Department, Karnataka) ಮಹತ್ವದ ಸುತ್ತೋಲೆ ಹೊರಡಿಸಿದೆ.

ಸುತ್ತೋಲೆಯಲ್ಲಿ, “ಅಶ್ಲೀಲ ಹಾಡುಗಳು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಜೊತೆಗೆ ಶಿಸ್ತಿನ ಅಭಾವ ಉಂಟಾಗುವ ಸಾಧ್ಯತೆ ಇದೆ ಹಾಗೂ ಶಿಕ್ಷಣ ಸಂಸ್ಥೆಗಳ ಗೌರವಕ್ಕೂ ಧಕ್ಕೆ ಉಂಟಾಗುತ್ತದೆ” ಎಂದು ಇಲಾಖೆ ಸ್ಪಷ್ಟಪಡಿಸಿದೆ.

ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಇಂತಹ ಚಟುವಟಿಕೆಗಳನ್ನು ತಡೆಯಲು ಜಾಗೃತಿ ಮೂಡಿಸುವಂತೆ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಯಾವುದೇ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡಲು ಪ್ರೇರೇಪಿಸಿದರೆ, ಆ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ಎಚ್ಚರಿಸಿದೆ.

ಇದರ ಪರ್ಯಾಯವಾಗಿ, ಪ್ರೇರಣಾದಾಯಕ, ದೇಶಭಕ್ತಿ, ನೈತಿಕ ಮೌಲ್ಯಗಳನ್ನು ಉತ್ತೇಜಿಸುವ ಹಾಗೂ ಸಹೋದರತ್ವ ಮತ್ತು ಗೌರವವನ್ನು ಪ್ರತಿಬಿಂಬಿಸುವ ಹಾಡುಗಳನ್ನು ಆಯ್ಕೆ ಮಾಡಲು ಶಿಕ್ಷಕರಿಗೆ ಸೂಚಿಸಲಾಗಿದೆ.

ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ಮತ್ತು ಶಿಕ್ಷಣ ಸಂಸ್ಥೆಗಳ ಮೌಲ್ಯ ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *