ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ: ಇಂದಿನಿಂದಲೇ ಹೊಸ ದರ ಜಾರಿ, ಹೋಟೆಲ್ ಉದ್ಯಮಕ್ಕೆ ಹೆಚ್ಚುವರಿ ಹೊರೆ

0
gas-cylinder-1-300x199-1

ನವದೆಹಲಿ: ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಅನಿಶ್ಚಿತತೆ ನಡುವೆಯೇ ದೇಶದ ಜನರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಹೆಚ್ಚಿಸಿದ್ದು, ಪರಿಷ್ಕೃತ ದರಗಳು ಜೂನ್ 1ರಿಂದ ಜಾರಿಗೆ ಬಂದಿವೆ.

ಹೊಸ ದರಗಳ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 42 ರೂ. ಏರಿಕೆಯಾಗಿದ್ದು, 3,113.50 ರೂ.ಗೆ ತಲುಪಿದೆ. ಕೋಲ್ಕತ್ತಾದಲ್ಲಿ 53.50 ರೂ. ಹೆಚ್ಚಳವಾಗಿದ್ದು, ಸಿಲಿಂಡರ್ ದರ 3,255.50 ರೂ. ಆಗಿದೆ.

ಇದರ ಜೊತೆಗೆ, 5 ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ (ಎಫ್‌ಟಿಎಲ್) ಸಿಲಿಂಡರ್ ದರವನ್ನೂ 11 ರೂ. ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಈ ಸಿಲಿಂಡರ್‌ನ ಹೊಸ ದರ 821.50 ರೂ. ನಿಗದಿಯಾಗಿದೆ.

ಬೆಂಗಳೂರುದಲ್ಲೂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯಾಗಿದ್ದು, 46 ರೂ. ಹೆಚ್ಚಳದೊಂದಿಗೆ 19 ಕೆಜಿ ಸಿಲಿಂಡರ್ ಬೆಲೆ 3,198 ರೂ.ಗೆ ತಲುಪಿದೆ. ಈ ಹಿಂದೆ ಕಳೆದ ತಿಂಗಳು ಇದರ ದರ 3,152 ರೂ. ಇತ್ತು.

ವಾಣಿಜ್ಯ ಸಿಲಿಂಡರ್ ದರ ಏರಿಕೆಯಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕ್ಯಾಟರಿಂಗ್ ಸೇವೆಗಳು ಹಾಗೂ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಆಹಾರ ಪದಾರ್ಥಗಳ ಬೆಲೆಗಳ ಮೇಲೂ ಪರಿಣಾಮ ಉಂಟಾಗುವ ಆತಂಕ ವ್ಯಕ್ತವಾಗಿದೆ.

ಆದರೆ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಸದ್ಯ ಮನೆ ಬಳಕೆಯ ಅನಿಲ ದರಗಳು ಯಥಾಸ್ಥಿತಿಯಲ್ಲೇ ಮುಂದುವರಿಯಲಿವೆ

Leave a Reply

Your email address will not be published. Required fields are marked *