ಮೈಸೂರು ದಸರಾ: ಬಾನು ಮುಷ್ತಾಕ್ ಅವರಿಂದ ಉದ್ಘಾಟಿಸುವುದಕ್ಕೆ ರಾಜಮನೆತನದ ಆಕ್ಷೇಪ

0
Yadhuveer Vodeyar

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿರುವ ವಿಚಾರ ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಆಡಳಿತರೂಢ ಕಾಂಗ್ರೆಸ್ ನಾಯಕರ ನಡೆಗೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಇದೇ ವೇಳೆ, ಮೈಸೂರು ರಾಜಮನೆತನ ಕೂಡಾ ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದೆ. ಸರ್ಕಾರದ ನಡೆಯನ್ನು ರಾಜವಂಶಸ್ಥರೂ ಆದ ಮೈಸೂರು ಸಂಸದ ಯಧುವೀರ್ ಬಲವಾಗಿ ವಿರೋಧಿಸಿದ್ದಾರೆ.

‘ಭಾನು ಮುಷ್ತಾಕ್ ಅವರು ಕನ್ನಡ ಸಾಹಿತ್ಯ ಲೋಕದ ವಿಶಿಷ್ಟ ಬರಹಗಾರ್ತಿ ಮತ್ತು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಕನ್ನಡ ಲೇಖಕಿಯಾಗಿ, ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಹೆಮ್ಮೆಯನ್ನು ತಂದಿದ್ದಾರೆ ನಿಜ ಆದರೆ ಈ ಹಿಂದೆ ಕನ್ನಡ ತಾಯಿ ಭುವನೇಶ್ವರಿಯ ಬಗ್ಗೆ ಅವರು ಕೆಲವು ಹೇಳಿಕೆಗಳನ್ನು ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ’ ಎಂದು ಯಧುವೀರ್ ಹೇಳಿದ್ದಾರೆ.

ದಸರಾ ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಬದಲಾಗಿ ಶಾಸ್ತ್ರ ಮತ್ತು ಪುರಾಣಗಳಲ್ಲಿ ಉಲ್ಲೇಖಗೊಂಡಿರುವ ಮತ್ತು ವಿಜಯನಗರ ಸಾಮ್ರಾಜ್ಯ ಮತ್ತು ಮೈಸೂರು ಸಂಸ್ಥಾನದ ಕಾಲದಿಂದಲೂ ವೈಭವದಿಂದ ಆಚರಿಸಲ್ಪಡುವ ಹಿಂದೂ ಧಾರ್ಮಿಕ ಉತ್ಸವವಾಗಿದೆ ಎಂದವರು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮ ‘X’ನಲ್ಲಿ ಪೋಸ್ಟ್ ಹಾಕಿದ್ದಾರೆ.

ಈ ಪವಿತ್ರ ಪರಂಪರೆಯನ್ನು ಗಮನಿಸಿದರೆ, ಈ ವರ್ಷದ ದಸರಾ ಆಚರಣೆಯ ಮುಖ್ಯ ಅತಿಥಿಯಾಗಿ ಉದ್ಘಾಟಿಸುವ ಮೊದಲು ಅವರು ತಾಯಿ ಭುವನೇಶ್ವರಿ ಮತ್ತು ತಾಯಿ ಚಾಮುಂಡೇಶ್ವರಿಯ ಬಗ್ಗೆ ಅವರ ಗೌರವವನ್ನು ಭಾನು ಮುಷ್ತಾಕ್ ಸ್ಪಷ್ಟಪಡಿಸುವುದು ಈ ಸಮಯದಲ್ಲಿ ಅತ್ಯಂತ ಅಗತ್ಯ ಎಂದು ಯಧುವೀರ್ ವ್ಯಕ್ತಪಡಿಸಿರುವ ಅಭಿಪ್ರಾಯ ಗಮನಸೆಳೆದಿದೆ.

Leave a Reply

Your email address will not be published. Required fields are marked *