ಮಲೆನಾಡಿನಲ್ಲಿ ಮಳೆ ಹಿನ್ನಡೆ; ಲಿಂಗನಮಕ್ಕಿ, ಭದ್ರಾ ಜಲಾಶಯಗಳ ಒಳಹರಿವು ಕುಸಿತ

ಶಿವಮೊಗ್ಗ: ಕಳೆದ ವಾರ ಧಾರಾಕಾರ ಮಳೆಗೆ ಸಾಕ್ಷಿಯಾಗಿದ್ದ ಮಲೆನಾಡಿನಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಮುಂಗಾರು ದುರ್ಬಲಗೊಂಡಿದ್ದು, ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಬಿಸಿಲಿನ ವಾತಾವರಣ ಹೆಚ್ಚಿರುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಮಳೆ ಕೊರತೆಯಿಂದ ಪ್ರಮುಖ ಜಲಾಶಯಗಳ ಒಳಹರಿವು ಕುಸಿದಿದ್ದು, ಭತ್ತದ ನಾಟಿ ಕಾರ್ಯವೂ ಇನ್ನೂ ಆರಂಭವಾಗಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಅಕ್ಕಿ ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಜುಲೈ 13ರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಪಶ್ಚಿಮಘಟ್ಟ ಪ್ರದೇಶಗಳಾದ ಯಡೂರು (10 ಮಿ.ಮೀ.), ಚಕ್ರಾ (10 ಮಿ.ಮೀ.), ಮಾಸ್ತಿಕಟ್ಟೆ (8 ಮಿ.ಮೀ.), ಮಾಣಿ (7 ಮಿ.ಮೀ.), ಸಾವೇಹಕ್ಲು (6 ಮಿ.ಮೀ.) ಹಾಗೂ ಹುಲಿಕಲ್ (5 ಮಿ.ಮೀ.)ಗಳಲ್ಲಿ ಮಾತ್ರ ತುಸು ಮಳೆಯಾಗಿದೆ. ಶಿವಮೊಗ್ಗ, ಸೊರಬ ಸೇರಿದಂತೆ ಬಹುತೇಕ ಭಾಗಗಳಲ್ಲಿ ಮಳೆ ಅತಿ ಕಡಿಮೆಯಾಗಿದೆ.

ಜಲಾಶಯಗಳ ಮಾಹಿತಿಯಂತೆ, ಲಿಂಗನಮಕ್ಕಿ ಜಲಾಶಯಕ್ಕೆ 4,999 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಹೊರಹರಿವು ಸ್ಥಗಿತಗೊಳಿಸಲಾಗಿದೆ. ನೀರಿನ ಮಟ್ಟ 1,762.90 ಅಡಿ ಇದ್ದು, ಗರಿಷ್ಠ ಮಟ್ಟ 1,819 ಅಡಿಯಾಗಿದೆ.
ಭದ್ರಾ ಜಲಾಶಯಕ್ಕೆ 1,713 ಕ್ಯೂಸೆಕ್ ಒಳಹರಿವು ಇದ್ದು, 220 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 147 ಅಡಿ 4 ಇಂಚು ಇದ್ದು, ಗರಿಷ್ಠ ಮಟ್ಟ 186 ಅಡಿ.
ತುಂಗಾ ಜಲಾಶಯ ಈಗಾಗಲೇ ಗರಿಷ್ಠ ಮಟ್ಟ ತಲುಪಿದ್ದು, 5,182 ಕ್ಯೂಸೆಕ್ ಒಳಹರಿವಿನ ನಡುವೆ 5,506 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಮಳೆ ಮತ್ತೆ ಚುರುಕುಗೊಳ್ಳುವ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದಾರೆ.
