ಬೆಂಗಳೂರಿನ ಜನತೆಗಾಗಿ ಸರ್ಕಾರದ ಕ್ರಮ; ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಪರಿವರ್ತನೆ ಶುಲ್ಕ ಶೇ.2ಕ್ಕೆ ಇಳಿಕೆ

0
Vidhanasoudha-300x179

ಬೆಂಗಳೂರು: ರಾಜ್ಯ ಸರ್ಕಾರವು ಬೆಂಗಳೂರಿನ ಜನತೆಗೆ ಮಹತ್ವದ ಘೋಷಣೆ ಮಾಡಿದ್ದು, ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಪರಿವರ್ತನೆ ಶುಲ್ಕವನ್ನು ಶೇ.5ರಿಂದ ಶೇ.2ಕ್ಕೆ ಇಳಿಸಿ 100 ದಿನಗಳ “ಸುವರ್ಣ ಅವಕಾಶ” ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ಸರಿಯಾದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವ ನಾಗರಿಕರಿಗೆ ಈ ರಿಯಾಯಿತಿ ಅನ್ವಯವಾಗಲಿದೆ ಎಂದು ಹೇಳಿದರು.

“ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸಲು ಸಾಮಾನ್ಯವಾಗಿ ಗೈಡ್‌ಲೈನ್ ಮೌಲ್ಯದ ಶೇ.5 ಶುಲ್ಕ ವಿಧಿಸಲಾಗುತ್ತದೆ. ಆದರೆ ಮುಂದಿನ 100 ದಿನಗಳ ಕಾಲ ಕೇವಲ ಶೇ.2 ಶುಲ್ಕ ಮಾತ್ರ ವಿಧಿಸಲಾಗುತ್ತದೆ. ಇದರಿಂದ ಜನರಿಗೆ ಶೇ.60 ರಷ್ಟು ರಿಯಾಯಿತಿ ಸಿಗಲಿದೆ,” ಎಂದು ತಿಳಿಸಿದರು.

ಒಂದು ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಸಾಮಾನ್ಯವಾಗಿ 5 ಲಕ್ಷ ರೂ. ಶುಲ್ಕ ಬರುತ್ತದೆ. ಹೊಸ ಯೋಜನೆಯಡಿ ಅದು 2 ಲಕ್ಷ ರೂ.ಗೆ ಇಳಿಕೆಯಾಗಲಿದೆ ಎಂದು ಅವರು ಉದಾಹರಣೆ ನೀಡಿದರು.

ನಗರದ ಸುಮಾರು 23 ಲಕ್ಷ ಆಸ್ತಿ ಮಾಲೀಕರಿಗೆ ಮನೆ ಬಾಗಿಲಲ್ಲೇ ಹಕ್ಕುಪತ್ರ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ “ನಮ್ಮ ಖಾತೆ, ನಮ್ಮ ಹಕ್ಕು” ಅಭಿಯಾನ ಆರಂಭಿಸಲಾಗಿದೆ ಎಂದು ಹೇಳಿದರು.

ಬೆಂಗಳೂರು ನಗರದಲ್ಲಿ ಸುಮಾರು 7 ಲಕ್ಷ ಬಿ ಖಾತಾ ಆಸ್ತಿಗಳಿದ್ದು, ಅವುಗಳನ್ನು ಎ ಖಾತಾಗೆ ಪರಿವರ್ತಿಸಲು ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ. ಪ್ಲಾನ್ ಇಲ್ಲದೆ ಮನೆ ನಿರ್ಮಿಸಿರುವವರಿಗೆ ಸಹ ಈ ಯೋಜನೆ ಅನುಕೂಲವಾಗಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

Leave a Reply

Your email address will not be published. Required fields are marked *

You may have missed