ಪಾಕಿಸ್ತಾನದಲ್ಲಿ ಭೀಕರ ಆತ್ಮಹತ್ಯಾ ಬಾಂಬ್ ದಾಳಿ; ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆ

0
Pak-army-baluchistan-750x552-1-300x221-1

ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ವಾತ್ ಜಿಲ್ಲೆಯ ಕಬಲ್ ಪೊಲೀಸ್ ಠಾಣೆ ಹೊರಭಾಗದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಆರು ಪೊಲೀಸ್ ಸಿಬ್ಬಂದಿ ಸೇರಿದಂತೆ 15 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಜಿಲ್ಲಾ ಪೊಲೀಸ್ ಅಧಿಕಾರಿ ಮುಹಮ್ಮದ್ ಓಮೆ ಮಾಹಿತಿ ನೀಡಿರುವಂತೆ, ಮೃತರಲ್ಲಿ ಒಂಬತ್ತು ನಾಗರಿಕರೂ ಸೇರಿದ್ದಾರೆ. ಗಂಭೀರವಾಗಿ ಗಾಯಗೊಂಡ ಹಲವರನ್ನು ಸೈದು ಷರೀಫ್ ಬೋಧನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಲಕಂಡ್ ಡಿಐಜಿ ಸೈಯದ್ ಫಿದಾ ಹುಸೇನ್ ಅವರ ಪ್ರಕಾರ, ಕಬಲ್ ಚೌಕ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಪೊಲೀಸ್ ಠಾಣೆ ಹಾಗೂ ಇತರ ಸೂಕ್ಷ್ಮ ಸರ್ಕಾರಿ ಕಚೇರಿಗಳ ಸಮೀಪ ಈ ಸ್ಫೋಟ ಸಂಭವಿಸಿದೆ. ಘಟನಾ ಸ್ಥಳದಲ್ಲಿ ನೂರಾರು ಜನರು ಸೇರಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ.

ಸ್ಫೋಟದ ಬಳಿಕ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆ ಆರಂಭಿಸಿದ್ದು, ದಾಳಿಯ ಕುರಿತು ತನಿಖೆ ನಡೆಸಲಾಗುತ್ತಿದೆ.

ಕೆಲವೇ ದಿನಗಳ ಹಿಂದೆ ಹಂಗು ಜಿಲ್ಲೆಯ ಖಾಜಿನಾ ಬಂಡಾ ಚೆಕ್‌ಪೋಸ್ಟ್ ಮೇಲೂ ಉಗ್ರರು ದಾಳಿ ನಡೆಸಿದ್ದು, ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಸೇರಿದಂತೆ ಒಂಬತ್ತು ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದರು. ಆ ದಾಳಿಗೆ ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸಂಘಟನೆ ಹೊಣೆ ಎಂದು ಪಾಕಿಸ್ತಾನ ಸರ್ಕಾರ ಆರೋಪಿಸಿತ್ತು.

ಇತ್ತೀಚಿನ ಬಾಂಬ್ ದಾಳಿ ಖೈಬರ್ ಪಖ್ತುಂಖ್ವಾ ಹಾಗೂ ಬಲೂಚಿಸ್ತಾನ್ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಹೆಚ್ಚುತ್ತಿರುವ ಉಗ್ರರ ದಾಳಿಗಳ ಬಗ್ಗೆ ಮತ್ತೊಮ್ಮೆ ಆತಂಕ ಮೂಡಿಸಿದೆ.

Leave a Reply

Your email address will not be published. Required fields are marked *