ಜಿಎಸ್‌ಟಿ ಸರಳ ಕಾರ್ಯವಿಧಾನ, ತ್ವರಿತ ಮರುಪಾವತಿ, ತೆರಿಗೆದಾರರಿಗೆ ಅನುಕೂಲ: ಹೊಸ ಶಿಫಾರಸಿಗೆ ಪ್ರಧಾನಿ ಸಹಮತ

0
GST-Modi-6-750x393-1

ನವದೆಹಲಿ: ಜಿಎಸ್‌ಟಿ ಮಂಡಳಿ ಶಿಫಾರಸು ಮಾಡಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸುಧಾರಣೆಗಳ ಹೊಸ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಈ ಬದಲಾವಣೆಗಳು ತೆರಿಗೆ ಆಡಳಿತವನ್ನು ಸರಳಗೊಳಿಸುವುದರ ಜತೆಗೆ, ಹೆಚ್ಚು ಪರಿಣಾಮಕಾರಿ ಮತ್ತು ನಾಗರಿಕ ಸ್ನೇಹಿಯನ್ನಾಗಿಸಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಮೋದಿ, ಬಂಧನಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ತೆಗೆದುಹಾಕುವುದು, ಅಪರಾಧೇತರ ಕ್ರಮಗಳಿಗೆ ಆದ್ಯತೆ ನೀಡುವುದು ಹಾಗೂ ತೆರಿಗೆ ಕಾರ್ಯವಿಧಾನಗಳನ್ನು ಸರಳಗೊಳಿಸುವ ಶಿಫಾರಸುಗಳು ತೆರಿಗೆದಾರರು ಮತ್ತು ಉದ್ಯಮಗಳಿಗೆ ಅನುಕೂಲ ಕಲ್ಪಿಸಲಿವೆ ಎಂದು ತಿಳಿಸಿದ್ದಾರೆ.

“ಜಿಎಸ್‌ಟಿ ಮಂಡಳಿಯು ಶಿಫಾರಸು ಮಾಡಿರುವ ಜಿಎಸ್‌ಟಿ ಸುಧಾರಣೆಗಳ ಹೊಸ ಹಂತವನ್ನು ಸ್ವಾಗತಿಸುತ್ತೇನೆ” ಎಂದು ಪ್ರಧಾನಿ ಹೇಳಿದ್ದಾರೆ.

ತೆರಿಗೆ ವ್ಯವಸ್ಥೆಯಲ್ಲಿ ತ್ವರಿತ ನಿರ್ಧಾರ ಕೈಗೊಳ್ಳುವಿಕೆ, ಅನುಸರಣೆ ವೆಚ್ಚ ಕಡಿತ, ಸ್ವಯಂಚಾಲಿತ ಮರುಪಾವತಿ ಮತ್ತು ನಂಬಿಕೆ ಆಧಾರಿತ ತೆರಿಗೆ ಆಡಳಿತವನ್ನು ಸುಧಾರಣೆಗಳ ಪ್ರಮುಖ ಅಂಶಗಳಾಗಿ ಮೋದಿ ಗುರುತಿಸಿದ್ದಾರೆ.

ತೆರಿಗೆ ಪಾವತಿ ಮತ್ತು ಸಂಬಂಧಿತ ಪ್ರಕ್ರಿಯೆಗಳನ್ನು ಸರಳಗೊಳಿಸುವುದರಿಂದ ಉದ್ಯಮಗಳು ಹಾಗೂ ಸಾಮಾನ್ಯ ತೆರಿಗೆದಾರರಿಗೆ ಎದುರಾಗುವ ಆಡಳಿತಾತ್ಮಕ ಹೊರೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *