ಜಾರ್ಖಂಡ್‌ನಲ್ಲಿ ಹಳಿತಪ್ಪಿದ ಶ್ರಾವಣಿ ಮೇಳ ವಿಶೇಷ ರೈಲು

0
Train-Railway-Track-750x428-1

ರಾಂಚಿ: ಜಾರ್ಖಂಡ್‌ನ ಸಿಲ್ಲಿ–ಬೊಕಾರೊ ರೈಲ್ವೆ ವಿಭಾಗದಲ್ಲಿ ಭಾನುವಾರ ಮುಂಜಾನೆ ಶ್ರಾವಣಿ ಮೇಳ ವಿಶೇಷ ರೈಲಿನ ಒಂದು ಬೋಗಿ ಹಳಿತಪ್ಪಿದ ಘಟನೆ ನಡೆದಿದೆ. ರೈಲಿನಲ್ಲಿ ಹೆಚ್ಚಿನ ಸಂಖ್ಯೆಯ ಕನ್ವಾರಿಯಾಗಳು ಪ್ರಯಾಣಿಸುತ್ತಿದ್ದರೂ, ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ.

ಮಧುಪುರದತ್ತ ತೆರಳುತ್ತಿದ್ದ ರೈಲಿನ ಎಂಜಿನ್‌ನಿಂದ ಮೂರನೇ ಬೋಗಿ ಮುಂಜಾನೆ ಸುಮಾರು 2.30ಕ್ಕೆ ಕಂಬ ಸಂಖ್ಯೆ 354/SA4ರ ಬಳಿ ಹಳಿತಪ್ಪಿದೆ. ಪರಿಣಾಮ ರೈಲು ಏಕಾಏಕಿ ದೊಡ್ಡ ಶಬ್ದದೊಂದಿಗೆ ನಿಂತಿದ್ದು, ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಉಂಟಾಯಿತು.

ಮಾಹಿತಿ ತಿಳಿದ ಕೂಡಲೇ ರೈಲ್ವೆ ಅಧಿಕಾರಿಗಳು, ಆರ್‌ಪಿಎಫ್ ಹಾಗೂ ಜಿಆರ್‌ಪಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ತಾಂತ್ರಿಕ ತಂಡ ರಕ್ಷಣಾ ಮತ್ತು ಪುನಃಸ್ಥಾಪನಾ ಕಾರ್ಯ ಆರಂಭಿಸಿ, ಹಳಿತಪ್ಪಿದ್ದ ಬೋಗಿಯನ್ನು ಸುರಕ್ಷಿತವಾಗಿ ಮತ್ತೆ ಹಳಿಗೆ ತಂದಿತು.

ಮುನ್ನೆಚ್ಚರಿಕಾ ಕ್ರಮವಾಗಿ ಬೋಗಿಯನ್ನು ಮುಂದಿನ ಪ್ರಯಾಣಕ್ಕೆ ಬಳಸದೆ ಮುರಿ ಯಾರ್ಡ್‌ನಲ್ಲಿ ಇರಿಸಲಾಯಿತು. ಅದರಲ್ಲಿದ್ದ ಕನ್ವಾರಿಯಾಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

ಘಟನೆಯಿಂದ ಕೆಲಕಾಲ ರೈಲು ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಯಿತು. ಹಾನಿಗೊಳಗಾದ ಹಳಿಯ ದುರಸ್ತಿ ಕಾರ್ಯವನ್ನು ತಕ್ಷಣ ಕೈಗೊಂಡ ರೈಲ್ವೆ ಸಿಬ್ಬಂದಿ ಬೆಳಗ್ಗೆ 5.15ರ ವೇಳೆಗೆ ಕಾರ್ಯ ಪೂರ್ಣಗೊಳಿಸಿದರು. ಬಳಿಕ ಬೊಕಾರೊ ವಿಭಾಗದಲ್ಲಿ ರೈಲು ಸಂಚಾರ ಪುನರಾರಂಭವಾಯಿತು.

ಬೋಗಿ ಹಳಿತಪ್ಪಲು ನಿಖರ ಕಾರಣ ಪತ್ತೆಹಚ್ಚಲು ರೈಲ್ವೆ ಇಲಾಖೆ ತನಿಖೆ ಆರಂಭಿಸಿದೆ. ಹಳಿಯ ಸ್ಥಿತಿ ಸೇರಿದಂತೆ ವಿವಿಧ ತಾಂತ್ರಿಕ ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *