ಕಲಬುರಗಿ ಜೈಲಿನಿಂದ ಪರಾರಿಯಾಗಿದ್ದ ಕೈದಿ ಬಂಧನ; ಹಲ್ಲೆಗೆ ಯತ್ನಿಸಿದ ವೇಳೆ ಪೊಲೀಸ್ ಫೈರಿಂಗ್

0
police-m-300x154-1

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಶಿಕ್ಷಿತ ಕೈದಿಗಳ ಪೈಕಿ ಸಂತೋಷ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೆ ತೆರಳಿದ ವೇಳೆ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಮಂಗಳವಾರ ತಡರಾತ್ರಿ ಸುಮಾರು 15ರಿಂದ 20 ಅಡಿ ಎತ್ತರದ ಜೈಲು ಗೋಡೆ ಹಾರಿ, ಟವೆಲ್ ಮತ್ತು ಹಾಸಿಗೆಗಳ ನೆರವಿನಿಂದ ಮೂವರು ಕೈದಿಗಳು ಪರಾರಿಯಾಗಿದ್ದರು. ಈ ಘಟನೆ ಕಾರಾಗೃಹದ ಭದ್ರತಾ ವ್ಯವಸ್ಥೆ ಬಗ್ಗೆ ತೀವ್ರ ಚರ್ಚೆಗೆ ಕಾರಣವಾಗಿತ್ತು.

ಮಂಗಳವಾರ ರಾತ್ರಿ ಜೈಲಿನಿಂದ ಪರಾರಿಯಾಗಿದ್ದ ಸಂತೋಷ್, ಮಸ್ತಾನ್ ಹಾಗೂ ಸಾಗರ್ ಬಂಧನಕ್ಕಾಗಿ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಶೋಧ ಕಾರ್ಯಾಚರಣೆ ವೇಳೆ ಕಪನೂರು ಕೈಗಾರಿಕಾ ಪ್ರದೇಶದಲ್ಲಿ ಸಂತೋಷ್ ಅಡಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.

ಆರೋಪಿಯನ್ನು ಬಂಧಿಸಲು ತೆರಳಿದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದು, ಈ ವೇಳೆ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳಿಗೂ ಗಾಯಗಳಾಗಿವೆ.

ಇದೀಗ ಪರಾರಿಯಾಗಿದ್ದ ಮೂವರ ಪೈಕಿ ಒಬ್ಬನನ್ನು ಬಂಧಿಸಿರುವ ಪೊಲೀಸರು, ಉಳಿದ ಇಬ್ಬರು ಕೈದಿಗಳಾದ ಮಸ್ತಾನ್ ಮತ್ತು ಸಾಗರ್ ಬಂಧನಕ್ಕಾಗಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *