ಉಚಿತ HPV ಲಸಿಕೆ ಅಭಿಯಾನ: ದೇಶಾದ್ಯಂತ 52.1 ಲಕ್ಷಕ್ಕೂ ಹೆಚ್ಚು ಬಾಲಕಿಯರಿಗೆ ಲಸಿಕೆ

0
corona-vaccine-in-karnataka-300x192-1

ನವದೆಹಲಿ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ಆರಂಭಿಸಲಾದ ರಾಷ್ಟ್ರವ್ಯಾಪಿ ಉಚಿತ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಲಸಿಕಾ ಅಭಿಯಾನದಡಿ ಇದುವರೆಗೆ 52.10 ಲಕ್ಷಕ್ಕೂ ಹೆಚ್ಚು ಬಾಲಕಿಯರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.

ಲಿಖಿತ ಉತ್ತರ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್, 2026ರ ಫೆಬ್ರವರಿ 28ರಂದು ದೇಶಾದ್ಯಂತ ಅಭಿಯಾನ ಆರಂಭಿಸಲಾಗಿದ್ದು, 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 14 ವರ್ಷ ವಯಸ್ಸಿನ ಸುಮಾರು 1.2 ಕೋಟಿ ಬಾಲಕಿಯರನ್ನು ಗುರಿಯಾಗಿರಿಸಿಕೊಂಡಿದೆ ಎಂದು ತಿಳಿಸಿದ್ದಾರೆ. ಜುಲೈ 15, 2026ರವರೆಗೆ 52,10,302 ಬಾಲಕಿಯರಿಗೆ ಲಸಿಕೆ ನೀಡಲಾಗಿದೆ.

ಆಯುಷ್ಮಾನ್ ಆರೋಗ್ಯ ಮಂದಿರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC), ಸಮುದಾಯ ಆರೋಗ್ಯ ಕೇಂದ್ರಗಳು (CHC), ಉಪ ಜಿಲ್ಲಾ ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಮೂಲಕ HPV ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವೈದ್ಯಕೀಯ ಹಾಗೂ ಅರೆವೈದ್ಯಕೀಯ ಸಿಬ್ಬಂದಿಗೆ ಅಗತ್ಯ ತರಬೇತಿ ಪೂರ್ಣಗೊಂಡಿದ್ದು, U-WIN ಡಿಜಿಟಲ್ ವೇದಿಕೆಯ ಮೂಲಕ ಲಸಿಕೆ ವಿತರಣೆಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಗ್ರಾಮೀಣ, ಬುಡಕಟ್ಟು ಮತ್ತು ನಗರ ಕೊಳಚೆ ಪ್ರದೇಶಗಳಲ್ಲಿ ಲಸಿಕೆ ಕುರಿತು ಜಾಗೃತಿ ಮೂಡಿಸಲು ರೇಡಿಯೋ, ಸಾಮಾಜಿಕ ಮಾಧ್ಯಮ, ಪೋಸ್ಟರ್, ಬ್ಯಾನರ್ ಹಾಗೂ ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಕಾರ್ಯತಂತ್ರವು ಕೇವಲ ಲಸಿಕೆಗೆ ಸೀಮಿತವಾಗಿಲ್ಲ. ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ತಪಾಸಣೆ, ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಾಗೂ ಡೇ ಕೇರ್ ಕ್ಯಾನ್ಸರ್ ಕೇಂದ್ರಗಳ (DCCC) ಮೂಲಕ ಚಿಕಿತ್ಸೆ ಒದಗಿಸುವ ಸಮಗ್ರ ಕಾರ್ಯಕ್ರಮವನ್ನೂ ಸರ್ಕಾರ ಜಾರಿಗೊಳಿಸಿದೆ ಎಂದು ಕೇಂದ್ರ ತಿಳಿಸಿದೆ.

Leave a Reply

Your email address will not be published. Required fields are marked *