ಅಮೆರಿಕ–ಇರಾನ್ ಜೊತೆ ಒಪ್ಪಂದವಾಗಿಲ್ಲವೆಂದು ಜೆಡಿ ವ್ಯಾನ್ಸ್

0
US Vice President JD Vance

ವಾಷಿಂಗ್ಟನ್: ಇಸ್ಲಾಮಾಬಾದ್‌ನಲ್ಲಿ 20 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಅಮೆರಿಕ–ಇರಾನ್ ಮಾತುಕತೆಗಳು ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯಗೊಂಡಿವೆ ಎಂದು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತಿಳಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮಹತ್ವದ ಚರ್ಚೆಗಳು ನಡೆದಿವೆ. ಆದರೆ ಅಂತಿಮವಾಗಿ ಒಪ್ಪಂದಕ್ಕೆ ಬರಲಾಗಿಲ್ಲ” ಎಂದು ಸ್ಪಷ್ಟಪಡಿಸಿದರು.

ಅಮೆರಿಕ ತನ್ನ “ಕೆಂಪು ರೇಖೆಗಳು” ಮತ್ತು ಷರತ್ತುಗಳನ್ನು ಸ್ಪಷ್ಟವಾಗಿ ತಿಳಿಸಿದ್ದರೂ, ಇರಾನ್ ಅವುಗಳನ್ನು ಸ್ವೀಕರಿಸಲು ನಿರಾಕರಿಸಿದೆ ಎಂದು ವ್ಯಾನ್ಸ್ ಹೇಳಿದರು. “ಇದು ಅಮೆರಿಕಕ್ಕಿಂತ ಇರಾನ್‌ಗೆ ಹೆಚ್ಚು ಕೆಟ್ಟ ಸುದ್ದಿ” ಎಂದೂ ಅವರು ಎಚ್ಚರಿಸಿದರು.

ಇರಾನ್ ಪರಮಾಣು ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ಪಡೆಯುವುದನ್ನು ತಡೆಯುವುದು ಅಮೆರಿಕದ ಪ್ರಮುಖ ಗುರಿಯಾಗಿದೆ ಎಂದು ಅವರು ಒತ್ತಿಹೇಳಿದರು. ತಾತ್ಕಾಲಿಕವಲ್ಲ, ದೀರ್ಘಾವಧಿಯ ಭರವಸೆ ಬೇಕು ಎಂಬುದನ್ನು ಅವರು ಸ್ಪಷ್ಟಪಡಿಸಿದರು.

ಮಾತುಕತೆಗಳ ವೇಳೆ ಅಮೆರಿಕ ತನ್ನ “ಅಂತಿಮ ಮತ್ತು ಅತ್ಯುತ್ತಮ ಕೊಡುಗೆ”ಯನ್ನು ಮಂಡಿಸಿದ್ದರೂ, ಅದನ್ನು ಅಂಗೀಕರಿಸಲಾಗಿಲ್ಲ ಎಂದು ತಿಳಿಸಿದರು.

ಸುಮಾರು 21 ಗಂಟೆಗಳ ಮ್ಯಾರಥಾನ್ ಚರ್ಚೆಗಳ ನಡುವೆಯೂ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ. ಅಧ್ಯಕ್ಷರೊಂದಿಗೆ ನಿರಂತರ ಸಮನ್ವಯದಲ್ಲೇ ಮಾತುಕತೆ ನಡೆಸಲಾಗಿದೆ ಎಂದು ವ್ಯಾನ್ಸ್ ಹೇಳಿದರು.

ಈ ಬೆಳವಣಿಗೆಗಳಿಂದ ಇರಾನ್ ಪರಮಾಣು ಕಾರ್ಯಕ್ರಮದ ಕುರಿತು ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ. ಅಮೆರಿಕ–ಇರಾನ್ ನಡುವೆ ಭಿನ್ನಾಭಿಪ್ರಾಯಗಳು ಮುಂದುವರಿದಿರುವುದು ಸ್ಪಷ್ಟವಾಗಿದೆ.

Leave a Reply

Your email address will not be published. Required fields are marked *