ಮುದ್ದೇನಹಳ್ಳಿಯಲ್ಲಿ 50 ವೈದ್ಯಕೀಯ ವಿದ್ಯಾರ್ಥಿಗಳಿಗೆ ಬಿಳಿ ಕೋಟ್ ಪ್ರದಾನ

ಚಿಕ್ಕಬಳ್ಳಾಪುರ: ವೈದ್ಯಕೀಯ ಶಿಕ್ಷಣಕ್ಕೆ ಕೋಟ್ಯಂತರ ರೂಪಾಯಿ ಶುಲ್ಕ ವಿಧಿಸುತ್ತಿರುವ ಇಂದಿನ ದಿನಗಳಲ್ಲಿ, ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ವೈದ್ಯಕೀಯ ಶಿಕ್ಷಣ ನೀಡುತ್ತಿರುವುದು ಜಗತ್ತಿನ ಅದ್ಭುತವೇ ಸರಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಈ ವರ್ಷ ಪ್ರವೇಶ ಪಡೆದ ನಾಲ್ಕನೇ ಬ್ಯಾಚ್‌ನ 50 ವಿದ್ಯಾರ್ಥಿಗಳಿಗೆ ಬಿಳಿ ಕೋಟ್ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಪೈಕಿ 29 ಮಂದಿ ವಿದ್ಯಾರ್ಥಿನಿಯರಾಗಿದ್ದಾರೆ.
ವಿವಿಧ ಸಚಿವ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದರೂ, ಒಬ್ಬ ವಿದ್ಯಾರ್ಥಿಗಾದರೂ ಉಚಿತ ವೈದ್ಯಕೀಯ ಸೀಟು ಕೊಡಿಸಲು ಸಾಧ್ಯವಾಗಿಲ್ಲ. ಆದರೆ, ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಬಡ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ಶಿಕ್ಷಣ ಒದಗಿಸುತ್ತಿರುವುದು ಶ್ಲಾಘನೀಯ. ಅವರ ನಿಸ್ವಾರ್ಥ ಸೇವೆ ಜಗತ್ತಿಗೆ ಮಾದರಿಯಾಗಿದೆ ಎಂದು ಅಶೋಕ್ ಮೆಚ್ಚುಗೆ ವ್ಯಕ್ತಪಡಿಸಿದರು. ನವರಾತ್ರಿ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬಿಳಿ ಕೋಟ್ ಪ್ರದಾನ ಮಾಡುತ್ತಿರುವುದು ಸ್ಮರಣೀಯ ಕ್ಷಣ ಎಂದರು.

ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಮಕ್ಕಳಿಗೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಪರಿಚಯ ಮಾಡಿಕೊಡುವುದರ ಜತೆಗೆ ವೇದ, ಉಪನಿಷತ್ತುಗಳ ಜ್ಞಾನ ಹಾಗೂ ಆಧುನಿಕ ವೈದ್ಯಕೀಯ ಶಿಕ್ಷಣ ನೀಡುತ್ತಿರುವುದು ಪ್ರಶಂಸನೀಯ ಎಂದರು. ತಾವು ಸಂಪಾದಿಸಿದ ಸಂಪತ್ತಿಗೆ ತಕ್ಕಂತೆ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗಿಲ್ಲ ಎಂಬ ಅರಿವು ಮೂಡಿದೆ. ಇನ್ನು ಮುಂದೆ ಕುಟುಂಬದೊಂದಿಗೆ ಸಮಾಜಸೇವೆಗೆ ಹೆಚ್ಚಿನ ಆದ್ಯತೆ ನೀಡಿ ಬಡವರ ನೆರವಿಗೆ ಮುಂದಾಗುವುದಾಗಿ ತಿಳಿಸಿದರು.
ಸೇವೆಯೇ ಆಧ್ಯಾತ್ಮಿಕತೆಯ ಸರಳ ಮಾರ್ಗ
ಆಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, ಅಹಂಕಾರವನ್ನು ತೊರೆದು ಇತರರಿಗೆ ಸೇವೆ ಸಲ್ಲಿಸುವುದೇ ಆಧ್ಯಾತ್ಮಿಕತೆಯ ಸರಳ ಮಾರ್ಗ ಎಂದರು. ವೈದ್ಯಕೀಯ ವಿದ್ಯಾರ್ಥಿಗಳು ಉತ್ತಮ ವೈದ್ಯರಾಗಿ ಹೊರಹೊಮ್ಮಿದರೆ, ತಮ್ಮ ಜೀವಿತಾವಧಿಯಲ್ಲಿ ಲಕ್ಷಾಂತರ ಜನರಿಗೆ ಸೇವೆ ಸಲ್ಲಿಸುವ ಅವಕಾಶ ದೊರೆಯಲಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಗೆ ಅವಕಾಶ ನೀಡದಿರುವ ಕಾಲೇಜಿನ ನಿರ್ಧಾರವನ್ನು ಸಮರ್ಥಿಸಿಕೊಂಡ ಅವರು, ಮೊಬೈಲ್‌ನಿಂದ ದೂರವಿರುವುದರಿಂದ ಓದಿನ ಮೇಲೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಿದೆ ಎಂದರು. ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ್ದು, ಎಲ್ಲರೂ ಡಿಸ್ಟಿಂಕ್ಷನ್ ಅಥವಾ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದರು.
ಸಂಸ್ಥೆಗೆ ಹೊಸದಾಗಿ ಪ್ರವೇಶ ಪಡೆದ 50 ವಿದ್ಯಾರ್ಥಿಗಳು ವೈದ್ಯಕೀಯ ವೃತ್ತಿಯನ್ನು ಸಮಾಜಸೇವೆಗೆ ಮುಡಿಪಾಗಿಡುವ ಶಪಥ ಸ್ವೀಕರಿಸಿದರು. ವೃತ್ತಿಯಲ್ಲಿ ಅನೈತಿಕ ಚಟುವಟಿಕೆಗಳಿಗೆ ಅವಕಾಶ ನೀಡದೆ, ತಮ್ಮ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದವರು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನಿಸ್ವಾರ್ಥ ವೈದ್ಯಕೀಯ ಸೇವೆ ಸಲ್ಲಿಸುವ ಸಂಕಲ್ಪ ವ್ಯಕ್ತಪಡಿಸಿದರು.
