ಭ್ರಷ್ಟರಿಗೆ, ಪಬ್ ಗಳಲ್ಲಿ ಗಲಾಟೆ ಮಾಡಿದವರಿಗೆ ಮಂತ್ರಿಸ್ಥಾನ; ವಿಜಯೇಂದ್ರ ಟೀಕೆ

0
Vijayendra-Yadiyurappa-300x190-1

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರು, ಪಬ್‌ಗಳಲ್ಲಿ ಗಲಾಟೆ ನಡೆಸಿದವರು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ವಿಫಲರಾದವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್‌ ಮಾಡಿರುವ ವಿಜಯೇಂದ್ರ, “ಎರಡು ತಿಂಗಳು ಹೈಕಮಾಂಡ್ ಮನೆಬಾಗಿಲು ಕಾದು, ಭ್ರಷ್ಟಾಚಾರ ಆರೋಪ ಹೊತ್ತವರು, ಪಬ್‌ಗಳಲ್ಲಿ ಗಲಾಟೆ ಮಾಡಿದವರು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯದವರಿಗೆ ಮಂತ್ರಿ ಸ್ಥಾನ ನೀಡಿ ರಾಜ್ಯಕ್ಕೆ ಅದ್ಭುತ ಸಚಿವ ಸಂಪುಟ ನೀಡಿದ್ದಾರೆ” ಎಂದು ಟೀಕಿಸಿದ್ದಾರೆ.

ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಅವಕಾಶ ನೀಡದಿರುವುದನ್ನು ಪ್ರಶ್ನಿಸಿರುವ ಅವರು, ಮಹಿಳೆಯರ ಪರವಾಗಿ ಮಾತನಾಡುವ ಕಾಂಗ್ರೆಸ್, ಮಹಿಳಾ ಪ್ರಾತಿನಿಧ್ಯದ ವಿಚಾರದಲ್ಲಿ ತನ್ನ ನಿಲುವಿಗೆ ವಿರುದ್ಧವಾಗಿ ನಡೆದುಕೊಂಡಿದೆ ಎಂದು ಆರೋಪಿಸಿದ್ದಾರೆ.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 183 ಕೋಟಿ ರೂ. ಹಗರಣದ ಆರೋಪ ಎದುರಿಸುತ್ತಿರುವವರನ್ನು ಸಚಿವರನ್ನಾಗಿ ಮಾಡಿರುವುದು ಭ್ರಷ್ಟಾಚಾರಕ್ಕೆ ಸರ್ಕಾರದ ಬೆಂಬಲವಿದೆ ಎಂಬುದನ್ನು ತೋರಿಸುತ್ತದೆ ಎಂದು ವಿಜಯೇಂದ್ರ ದೂರಿದ್ದಾರೆ.

ಇದೇ ವೇಳೆ, ಎಂಟು ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡದಿರುವುದನ್ನೂ ಪ್ರಶ್ನಿಸಿದ ಅವರು, ಆ ಜಿಲ್ಲೆಗಳಲ್ಲಿ ಸಚಿವರಾಗುವ ಅರ್ಹತೆ ಹೊಂದಿರುವ ಒಬ್ಬರೂ ಸಿಗಲಿಲ್ಲವೇ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಐಸಿಸಿ ಅಧ್ಯಕ್ಷರ ಜಿಲ್ಲೆಯ ಮೂವರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಯಾದಗಿರಿ, ರಾಯಚೂರು ಹಾಗೂ ವಿಜಯನಗರ ಸೇರಿದಂತೆ ಹಲವು ಜಿಲ್ಲೆಗಳು ಸಂಪುಟದಲ್ಲಿ ಪ್ರಾತಿನಿಧ್ಯದಿಂದ ವಂಚಿತವಾಗಿವೆ ಎಂದು ಹೇಳಿದ್ದಾರೆ.

ಮಹಿಳಾ ವಿರೋಧಿ ಹಾಗೂ ಭ್ರಷ್ಟಾಚಾರವನ್ನು ಪೋಷಿಸುವ ಸರ್ಕಾರಕ್ಕೆ ರಾಜ್ಯದ ಜನರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed