UPI ಶುಲ್ಕ: ಡಿಜಿಟಲ್ ಭಾರತದ ಆಶಯಕ್ಕೆ ಹಿನ್ನಡೆ; ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಪೂಜಾರಿ ಬೇಸರ

ಮಂಗಳೂರು: ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸುವ ಸರ್ಕಾರದ ನಿಲುವು ‘ಡಿಜಿಟಲ್ ಇಂಡಿಯಾ’ ಆಶಯಕ್ಕೆ ಹಿನ್ನಡೆಯಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಆರೋಪಿಸಿದ್ದಾರೆ.
ಮಾಧ್ಯಮ ಹೇಳಿಕೆ ನೀಡಿರುವ ಅವರು, ಆರಂಭದಲ್ಲಿ ಉಚಿತ ಹಾಗೂ ಸರಳ ಡಿಜಿಟಲ್ ವಹಿವಾಟಿನ ವ್ಯವಸ್ಥೆಯನ್ನು ಉತ್ತೇಜಿಸಿ ಜನರನ್ನು ಡಿಜಿಟಲ್ ವಹಿವಾಟಿನತ್ತ ಸೆಳೆದ ಬಳಿಕ, ಇದೀಗ ಶುಲ್ಕ ವಿಧಿಸಲು ಮುಂದಾಗಿರುವುದು ಸರ್ಕಾರದ ಅಸಂಬದ್ಧ ನೀತಿಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಯುಪಿಐ ಶುಲ್ಕವನ್ನು ಗ್ರಾಹಕರ ಬದಲಿಗೆ ವ್ಯಾಪಾರಿಗಳ ಮೇಲೆ (MDR) ವಿಧಿಸಲಾಗುತ್ತದೆ ಎಂಬ ವಾದ ಸರಿಯಲ್ಲ. ಅಂತಿಮವಾಗಿ ವ್ಯಾಪಾರಿಗಳು ಈ ಹೆಚ್ಚುವರಿ ವೆಚ್ಚವನ್ನು ದಿನಸಿ, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಗ್ರಾಹಕರ ಮೇಲೆಯೇ ವರ್ಗಾಯಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

₹1 ಲಕ್ಷದವರೆಗಿನ ವಿನಾಯಿತಿ ಸೇರಿದಂತೆ ಜಿಎಸ್‌ಟಿ ಲೆಕ್ಕಾಚಾರಗಳಲ್ಲಿನ ಗೊಂದಲಗಳು ಸಣ್ಣ ವ್ಯಾಪಾರಿಗಳಲ್ಲಿ ಅನಿಶ್ಚಿತತೆ ಮೂಡಿಸಬಹುದು. ಇದರಿಂದ ಕೆಲವರು ಡಿಜಿಟಲ್ ಪಾವತಿಗೆ ಬದಲಾಗಿ ನಗದು ವಹಿವಾಟಿಗೆ ಒತ್ತು ನೀಡುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಪದ್ಮರಾಜ್ ಪೂಜಾರಿ ತಿಳಿಸಿದ್ದಾರೆ.
₹2,000ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಶುಲ್ಕ ಹಾಗೂ ತೆರಿಗೆ ವಿಧಿಸುವ ಕ್ರಮ ಜಾರಿಯಾದರೆ ಜನರು ಮತ್ತೆ ನಗದು ವಹಿವಾಟಿನತ್ತ ಮುಖ ಮಾಡುವ ಸಾಧ್ಯತೆ ಇದೆ. ಇದು ಪಾರದರ್ಶಕ ಆರ್ಥಿಕ ವ್ಯವಸ್ಥೆಗೆ ಧಕ್ಕೆಯಾಗುವ ಜತೆಗೆ ಕಪ್ಪುಹಣದ ಚಲಾವಣೆಗೆ ಅವಕಾಶ ಕಲ್ಪಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಆರ್ಥಿಕತೆಯನ್ನು ನಗದುರಹಿತ ವ್ಯವಸ್ಥೆಯತ್ತ ಕೊಂಡೊಯ್ಯುವ ಬದಲು ಡಿಜಿಟಲ್ ವಹಿವಾಟನ್ನೇ ಹೊರೆಯನ್ನಾಗಿ ಮಾಡುವ ಯಾವುದೇ ಕ್ರಮವನ್ನು ಸರ್ಕಾರ ಕೈಬಿಡಬೇಕು ಎಂದು ಪದ್ಮರಾಜ್ ಆರ್. ಪೂಜಾರಿ ಆಗ್ರಹಿಸಿದ್ದಾರೆ.
