24 ವರ್ಷಗಳ ಬಳಿಕ ಮತ್ತೆ ಒಂದಾದ ಉಪೇಂದ್ರ–ಪ್ರಭುದೇವ

0
Indian-Actors-in-Warm-Portrait-Close-Up-300x200-1

ಬೆಂಗಳೂರು: ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಬಹುಭಾಷಾ ನಟ, ನೃತ್ಯ ನಿರ್ದೇಶಕ ಪ್ರಭುದೇವ ಬರೋಬ್ಬರಿ 24 ವರ್ಷಗಳ ಬಳಿಕ ಮತ್ತೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜನಪ್ರಿಯ ಓಟಿಟಿ ವೇದಿಕೆ ನೆಟ್‌ಫ್ಲಿಕ್ಸ್ ನಿರ್ಮಿಸುತ್ತಿರುವ ಈ ಬಿಗ್ ಬಜೆಟ್ ಮಲ್ಟಿಸ್ಟಾರರ್ ಚಿತ್ರಕ್ಕೆ ಕಾಲಿವುಡ್‌ನ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಸಿನಿಮಾಕ್ಕೆ ಶೀರ್ಷಿಕೆ ಇಟ್ಟಿಲ್ಲ.

2002ರಲ್ಲಿ ತೆರೆಕಂಡ ‘H2O’ ಸಿನಿಮಾದಲ್ಲಿ ಉಪೇಂದ್ರ ಮತ್ತು ಪ್ರಭುದೇವ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು. ಚಿತ್ರ ಯಶಸ್ಸು ಕಂಡ ಬಳಿಕ ಈ ಜೋಡಿ ಮತ್ತೆ ಒಂದಾಗಿರಲಿಲ್ಲ. ಇದೀಗ ಬರೋಬ್ಬರಿ 24 ವರ್ಷಗಳ ಬಳಿಕ ಇಬ್ಬರೂ ಮತ್ತೆ ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ನೇರವಾಗಿ ಓಟಿಟಿಯಲ್ಲಿ ಬಿಡುಗಡೆ

ವಿಶೇಷವೆಂದರೆ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೆ ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎನ್ನಲಾಗಿದೆ.

ತಮಿಳುನಾಡಿನ ಸಾಂಪ್ರದಾಯಿಕ ಜಾನಪದ ಕಲೆಯಾದ ‘ಪುಲಿಯಾಟ್ಟಂ’ ಅಥವಾ ಹುಲಿ ವೇಷದ ನೃತ್ಯವನ್ನು ಆಧರಿಸಿದ ಕಾದಂಬರಿಯೊಂದರಿಂದ ಪ್ರೇರಣೆ ಪಡೆದು ಕಾರ್ತಿಕ್ ಸುಬ್ಬರಾಜ್ ಈ ಗ್ರಾಮೀಣ ಹಿನ್ನೆಲೆಯ ಆ್ಯಕ್ಷನ್-ಡ್ರಾಮಾ ಕಥೆಯನ್ನು ರೂಪಿಸಿದ್ದಾರೆ ಎನ್ನಲಾಗಿದೆ.

ಚಿತ್ರದಲ್ಲಿ ಉಪೇಂದ್ರ ಮತ್ತು ಪ್ರಭುದೇವ ಜತೆಗೆ ತಮಿಳಿನ ಯುವ ನಟ ಅಥರ್ವ ಮುರಳಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ‘ಡೊರೊತಿ’ ಚಿತ್ರದ ಪ್ರಮೋಷನ್ ವೇಳೆ ಕಾರ್ತಿಕ್ ಸುಬ್ಬರಾಜ್ ಅವರು ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣವನ್ನು ಯಾರಿಗೂ ತಿಳಿಯದಂತೆ ರಹಸ್ಯವಾಗಿ ಪೂರ್ಣಗೊಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಸಿನಿಮಾದ ಮುಂದಿನ ಹಂತದ ಶೂಟಿಂಗ್ ಅಕ್ಟೋಬರ್ ಮಧ್ಯಭಾಗದಿಂದ ಆರಂಭವಾಗುವ ಸಾಧ್ಯತೆ ಇದೆ.

ಚಿತ್ರ ತಮಿಳು ಭಾಷೆಯಲ್ಲಿ ನಿರ್ಮಾಣವಾಗುತ್ತಿದ್ದು, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಭಾಷೆಗಳಿಗೆ ಡಬ್ ಮಾಡಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಉಪೇಂದ್ರ–ಪ್ರಭುದೇವ ಜೋಡಿಯ ಪುನರ್ಮಿಲನದ ಜತೆಗೆ ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಈ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

Leave a Reply

Your email address will not be published. Required fields are marked *

You may have missed